ಮೂಡಿಗೆರೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಬಹುತೇಕ ಗ್ರಾಮಗಳ ರಸ್ತೆ ಬದಿಯಲ್ಲಿ ಮರಗಳ ಬೀಳೋ, ರೆಂಬೆಗಳು ವಿದ್ಯುತ್ ಕಂಬ ಹಾಗೂ ತಂತಿಗಳಿಗೆ ತಾಗಿಕೊಂಡಿದ್ದು, ಇದರಿಂದ ಮಳೆಗಾಲದಲ್ಲಿ ಬಾರಿ ಅವಘಡಗಳು ಸಂಭವಿಸುವ ಸಾಧ್ಯತೆಯಿದೆ.
ಮೆಸ್ಕಾಂ ಇಲಾಖೆ ಪ್ರತಿ ವರ್ಷ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಜಂಗಲ್ ಕಟ್ ಮಾಡುತ್ತಿದ್ದರಿಂದ ಈ ಹಿಂದೆ ತಾಲೂಕಿನಲ್ಲಿ ಮಳೆಗಾಲ ಸಂದರ್ಭದಲ್ಲಿ ಗಾಳಿ ಮಳೆಯಿಂದ ದುರ್ಬಲವಾಗಿರುವ ಮರಗಳು ನೆಲಕ್ಕುರುಳಿ ಬಾರಿ ಅನಾಹುತ ಸಂಭವಿಸಿದೆ. ಮರಗಳು ಮನೆ ಮೇಲೆ ಬಿದ್ದು, ಮನೆ ಜಖಂಗೊಳ್ಳುವ ಜೊತೆಗೆ ಪ್ರಾಣ ಹಾನಿ ಕೂಡ ಸಂಭವಿಸಿದೆ. ರಸಗೆ. ಅಡ್ಡಲಾಗಿ ಮರ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಅಪಘಾತಗಳೂ ಕೂಡ ನಡೆದಿವೆ. ಅಲ್ಲದೇ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು, ವಾರಗಟ್ಟಲೆ ವಿದ್ಯುತ್ ವ್ಯತ್ಯಯವಾಗಿದೆ. ಈ ಸಮಸ್ಯೆ ಪ್ರತಿ ವರ್ಷವೂ ಉಲ್ಬಣಿಸುತ್ತಿದೆ

ಇತ್ತೀಚೆಗೆ ವಿದ್ಯುತ್ ತಂತಿ ತುಂಡಾಗಿ ಬೀಜವಳ್ಳಿ ಸಮೀಪದ ಹಳ್ಳಕ್ಕೆ ಬಿದಿದ್ದರಿಂದ ವಿದ್ಯುತ್ ಹರಿದು ಬಿಳಗುಳ ಗ್ರಾಮದ ಕಲ್ಲೇಶ್ ಎಂಬುವರ 1 ಸಿಂದಿ ಹಸು ಹಾಗೂ ಚಂದ್ರಯ್ಯ ಅವರ 2 ನಾಟಿ ಹಸುಗಳು ಮೃತಪಟ್ಟಿವೆ.
ಪ್ರಸ್ತುತ ಮೂಡಿಗೆರೆ ಪಟ್ಟಣದ ಡಿಎಸ್ ಬಿಜಿ ಕಾಲೇಜಿನ ಹಿಂಭಾಗದಲ್ಲಿ ಬೃಹತ್ ಮರವೊಂದು ಸೀಳು ಬಿಟ್ಟಿದ್ದು. ನೆಲಕ್ಕುರುಳಲು ಸಿದ್ಧವಾಗಿ ನಿಂತಿದೆ. ಈ ಮರ ತುಂಡಾಗಿ ಬಿದ್ದರೆ ಅಲ್ಲಿರುವ ಐದಾರು ವಿದ್ಯುತ್ ಕಂಬಗಳು ನೆಲಕ್ಕುರುವ ಜತೆಗೆ ಮನೆಗಳ ಮೇಲೆ ಬಿದ್ದು ಬಾರಿ ದುರಂತ ಸಂಭವಿಸುವ ಸಾಧ್ಯತೆಯಿದೆ. ತಾಲೂಕಿನ ಬೈರಾಪುರ ಗ್ರಾಮದ ಗೋಪಾಲ ಎಂಬುವರ ಮನೆ ಪಕ್ಕದಲ್ಲಿ ವಿದ್ಯುತ್ ಕಂಬ ಮುರಿದು ತಂತಿ ಸಹಾಯದಿಂದ ನೇತಾಡುತ್ತಾ ನಿಂತಿದ್ದು, ಯಾವ ಸಮಯದಲ್ಲಾದರೂ ಕಂಬ ಮನೆ ಮೇಲೆ ಬಿದ್ದು ಅವಘಡ ಸಂಭವಿಸಬಹುದು. ಇದೇ ಗ್ರಾಮದ ಸುಧೀರ್ ಮನೆ ಬಳಿ ವಿದ್ಯುತ್ ಕಂಬಕ್ಕೆ ಮರದ ರೆಂಬೆಗಳು ತಾಗಿಕೊಂಡಿದೆ. ಕಣಚೂರು ಗ್ರಾಮದ ಬಳಿ ವಿದ್ಯುತ್ ಕಂಬ ಸಹಿತ ಟ್ರಾನ್ಸ್‌ಪಾರ್ಮ‌್ರಗೆ ಮರದ ಬಳ್ಳಿ ಆವರಿಸಿಕೊಂಡಿದೆ. ಲೋಕವಳ್ಳಿ ಎಸ್ಟೇಟ್ ಗ್ರಾಮದಲ್ಲಿ ಮರದೊಳಗೆ ವಿದ್ಯುತ್ ಕಂಬ ಮುಚ್ಚಿಹೋಗಿದೆ. ದೇವವೃಂದ ಸಮೀಪದ ಅಜ್ಜಿಗುಡ್ಡ ಗ್ರಾಮದ ಬಳಿ ಅನೇಕ ಮರದ ರೆಂಬೆ ಹಾಗೂ ಬಳ್ಳಿಗಳು ವಿದ್ಯುತ್ ಕಂಬಗಳನ್ನು ನುಂಗಿಬಿಟ್ಟಿದೆ. ಅಲ್ಲದೇ ಕನ್ನಾಪುರದ ಬಳಿ ತೋಟವೊಂದರ ರಸ್ತೆ ಬದಿಯಲ್ಲಿರುವ ಅಕೇಶಿಯಾ ಮರಗಳಿಗೆ ವಿದ್ಯುತ್ ತಂತಿ ತಾಗಿ ಅವಘಡಕ್ಕೆ ಸಿದ್ಧವಾಗಿದೆ.
ಮೂಡಿಗೆರೆ ಪಟ್ಟಣದಲ್ಲಿ ಛತ್ರಮೈದಾನದ ವಾರ್ಡ್ ನಂಬರ್ 6ರಲ್ಲಿ ವಿದ್ಯುತ್ ತಂತಿ ಮತ್ತು ಕಂಬವನ್ನು ಮರವೊಂದು. ಆಕ್ರಮಿಸಿಕೊಂಡಿದೆ. ಪಟ್ಟಣದ ತಕ್ಕೋಳ ರಸ್ತೆಯಿಂದ ಕುವೆಂಪುನಗರಕ್ಕೆ ತೆರಳುವ ರಸ್ತೆಯಲ್ಲಿ ಮರದ ಬೀಳು ವಿದ್ಯುತ್ ತಂತಿಗೆ. ಸುತ್ತಿಕೊಂಡಿದೆ. ಬಿಇಒ ಕಚೇರಿ ಮುಂದೆ, ಕಾಂಗ್ರೆಸ್ ಭವನದ ಮುಂದೆ ಹೀಗೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅನೇಕ ಕಡೆ ವಿದ್ಯುತ್ ತಂತಿಗಳ ಮೇಲೆ ಮರದ ರೆಂಬೆಗಳು ಹಾಗೂ ಬಳ್ಳಿಗಳು ತಾಗಿದ್ದರಿಂದ ಮಳೆ ಬಂದಾಗ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಮಳೆಗಾಲ ಪ್ರಾರಂಭಗೊಳ್ಳುವ ಮುನ್ನ ಹಳೆಯ ಹಾಗೂ ದುರ್ಬಲವಾದ ಮರಗಳು ಹಾಗೂ ವಿದ್ಯುತ್ ಕಂಬ ಹಾಗೂ ತಂತಿಗಳಿಗೆ ರೆಂಬೆ ಬಳ್ಳಿಗಳು ತಾಗಿರುವುದನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
