ಶೃಂಗೇರಿ: ಪ್ರಪಂಚದಾದ್ಯಂತ ಅನೇಕ ಕಾಣೆಯಾದವರ ಪ್ರಕರಣಗಳು ಸುಖಾಂತ್ಯ ಮತ್ತು ದಾರುಣ ಅಂತ್ಯ ಕಂಡ ಉದಾಹರಣೆಗಳಿವೆ. ಅದರಲ್ಲೂ ಕೆಲವು ಪ್ರಕರಣಗಳು ತುಂಬಾ ವಿಶೇಷವಾಗಿರುತ್ತವೆ.

ಹೌದು .. ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಅಂತಹದ್ದೇ ವಿಶೇಷ ಪ್ರಕರಣವೊಂದು ಭಾವುಕ ಅಂತ್ಯ ಕಂಡಿದೆ. ತಾಲೂಕಿನ ಕೆರೆಕಟ್ಟೆ ಸಮೀಪದ ಕುಗ್ರಾಮ ಕೆರೆಗದ್ದೆ ವಾಸಿಗಳಾದ ಜಯಮ್ಮ ಎಂಬುವರ ಮಗ ಪ್ರೀತಿ ಕುಮಾರ ಕಳೆದ 2018 ರ ಮೇ ತಿಂಗಳಲ್ಲಿ ಮನೆಬಿಟ್ಟು ಹೋದವನು ಹಿಂತಿರುಗಿ ಬಂದಿರುವುದಿಲ್ಲ, ಮಗನ ಸುಳಿವು ಸಿಗದ ತಾಯಿ ಜಯಮ್ಮ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.ಆ ದೂರಿನನ್ವಯ ಪೊಲೀಸರು ಹುಡುಕುವ ಪ್ರಯತ್ನ ಮಾಡಿದರಾದರೂ ಎಲ್ಲೂ ಪ್ರೀತಿ ಕುಮಾರನ ಸುಳಿವು ಪತ್ತೆಯಾಗಿರಲಿಲ್ಲ.
ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಯಾದ ವಿಕ್ರಂ ಅಮಟೆಯವರ ಮಾರ್ಗದರ್ಶನದಂತೆ ಶೃಂಗೇರಿ ಪಿಎಸ್‌ಐ ಅಭಿಷೇಕ್ ಕೆ ಅವರ ನೇತೃತ್ವದಲ್ಲಿ ಎಎಸ್ಐ ರಮೇಶ್ ಹಾಗೂ ರಜಿತ್ ಹೆಚ್ ಸಿ ರವರನ್ನೊಳಗೊಂಡ ತಂಡ ರಚಿಸಿ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಪತ್ತೆಗಿಳಿದಾಗ ಪ್ರೀತಿ ಕುಮಾರ್ ಮಹಾರಾಷ್ಟ್ರದ ಪುಣೆಯಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ, ಮಾಹಿತಿಯ ಬೆನ್ನತಿದ ಪೊಲೀಸರು ಪುಣೆಯ ಸ್ಥಳೀಯರಾದ ಸಂಜೀವ ಶೆಟ್ಟಿ ಹಾಗೂ ಲಕ್ಷ್ಮಣ್ ಎಂಬುವರ ಸಹಾಯ ಪಡೆದು ಪುಣೆಯಲ್ಲಿ ಯಾವುದೇ ಮೊಬೈಲ್ ಹಾಗೂ ಮನೆ ಇಲ್ಲದೇ ಅಲ್ಲಿ ಇಲ್ಲಿ ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರಿಯ ಕುಮಾರನನ್ನು ಪತ್ತೆ ಮಾಡಿ ಮರಳಿ ಆತನನ್ನು ಶೃಂಗೇರಿಯ ಕೆರೆಕಟ್ಟೆ ಬಳಿಯ ಕೆರೆಗದ್ದೆಗೆ ಕರೆತಂದು ತಾಯಿ ಜಯಮ್ಮರ ಮಡಿಲು ಸೇರಿಸುವಲ್ಲಿ ಶೃಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಕುಟುಂಬ ಹಾಗೂ ಗ್ರಾಮಸ್ಥರು ತಾಲೂಕಿನ ಜನತೆಯಿಂದ ಪ್ರಶಂಸೆ ವ್ಯಕ್ತಪಡಿಸಿ ಧನ್ಯವಾದ ತಿಳಿಸಿದ್ದಾರೆ.
ಕಾಣೆಯಾದವನ ಹುಡುಕಿ ಕರೆತಂದ ಹಿಂದಿದೆ ನೋವಿನ ಕಥೆ
ಮೊದಲೇ ಹೇಳಿದಂತೆ ಪ್ರಪಂಚದಾದ್ಯಂತ ಇಂತಹ ಅನೇಕ ಪ್ರಕರಣಗಳು ಸಾಮಾನ್ಯವಾಗಿ ನಡೆಯುತ್ತಿರುತ್ತವೆ,ಅವುಗಳಲ್ಲಿ ಕೆಲವು ಸುಖಾಂತ್ಯ ಇನ್ನೂ ಕೆಲವು ದಾರುಣ ಅಂತ್ಯ ಕಂಡಿವೆ. ಹಾಗೆಯೇ ಈ ಪ್ರಕರಣವು ಸುಖಾಂತ್ಯ ಕಂಡರೂ ಇದರ ಹಿಂದೆ ನೋವಿನ ಕಥೆಯೊಂದಿದೆ.
ಶೃಂಗೇರಿ ತಾಲೂಕಿನ ಕೆರೆಕಟ್ಟೆ ಸಮೀಪದ ಕೆರೆಗದ್ದೆ ಗ್ರಾವು ಕಳೆದೊಂದು ವಾರದಿಂದ ಭಾರೀ ಸುದ್ದಿಯಲ್ಲಿತ್ತು ಕಾರಣ ಕಾಡಾನೆ, ಹೌದು., ಕಾಡಾನೆ ದಾಳಿ ಮಾಡಿ ಇಬ್ಬರನ್ನು ಬಲಿ ಪಡೆದಿತ್ತು ನಂತರ ನಡೆದ ಬೆಳವಣಿಗೆಯಲ್ಲಿ ಪ್ರತಿಭಟನೆ,ಆಕ್ರೋಶದಿಂದ ಸರ್ಕಾರ ಕಾಡಾನೆ ಸೆರೆಗೆ ಆದೇಶಿಸಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಆನೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು.
ಕಾಡಾನೆ ದಾಳಿಯಲ್ಲಿ ಹರೀಶ್ ಶೆಟ್ಟಿ ಹಾಗೂ ಉಮೇಶ್ ಗೌಡ ಎಂಬ ಇಬ್ಬರು ರೈತರು ಮೃತಪಟ್ಟಿದ್ದರು. ಕಾಣೆಯಾಗಿದ್ದ ಪ್ರಿಯ ಕುಮಾರ ಮೃತ ಹರೀಶ್ ಶೆಟ್ಟಿಯ ಅಳಿಯನಾಗಬೇಕು (ಅಕ್ಕನ ಮಗ). ಹರೀಶ್ ತನ್ನ ಸಾವಿಗೂ ಕೆಲ ದಿನಗಳ ಹಿಂದೆ ಶೃಂಗೇರಿ ಪೊಲೀಸರಿಗೆ ತನ್ನ ಅಳಿಯನ್ನು ಹುಡುಕಿಕೊಡುವಂತೆ ಠಾಣೆಗೆ ಹೋಗಿ ಮನವಿ ಮಾಡಿದ್ದರು,ಅವರಿಗೆ ನೀಡದ ಭರವಸೆಯಂತೆ ಪೊಲೀಸರು ಪ್ರಿಯ ಕುಮಾರನನ್ನು ಪತ್ತೆ ಮಾಡಿ ಕರೆತಂದರು ದೃರದೃಷ್ಟವಾಶಾತ್ ಅಳಿಯನ ಬರುವಿಕೆಗೆ ಕಾದಿದ್ದ ಮಾವ ಹರೀಶ್ ಕಾಡಾನೆ ದಾಳಿಗೆ ಬಲಿಯಾಗಿದ್ದ,ಇತ್ತ 7 ವರ್ಷಗಳ ನಂತರ ತವರಿಗೆ ಬಂದ ಪ್ರಿಯ ಕುಮಾರ್‌ಗೆ ತನ್ನ ಸೋದರ ಮಾವನ ಕೊನೆ ಕ್ಷಣದ ಮುಖ ನೋಡಲು ಸಿಗಲಿಲ್ಲ. ಇದೊಂದು ವಿಚಿತ್ರ ಘಟನೆ ಈ ಪ್ರಕರಣದ ಅಂತ್ಯ ಸುಖಾಂತ್ಯವೋ,ದಾರುಣ ಅಂತ್ಯವೋ ಏನು ಹೇಳಬೇಕೋ ತಿಳಿಯುತ್ತಿಲ್ಲ,ಇದು ಸಂತೋಷಕ್ಕೊಂದು ದುಖಃದ ಅಂತ್ಯ.
7 ವರ್ಷಗಳಿಂದ ಮಗನ ಅಗಲುವಿಕೆಯಿಂದ ನೊಂದಿದ್ದ ತಾಯಿಯ ನೋವಿಗೆ,ಸಾಮಾನ್ಯ ಜನರ ನೋವಿಗೆ ಸ್ಪಂದಿಸಿ ಮಗನ ಪತ್ತೆ ಮಾಡಿ ತಾಯಿಯ ಮಡಿಲು ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಚಿಕ್ಕಮಗಳೂರು ಎಸ್‌ಪಿ ಮತ್ತು ಶೃಂಗೇರಿ ಪೊಲೀಸರಿಗೆ ಪಬ್ಲಿಕ್ ಇಂಪ್ಯಾಕ್ಟ್ ಪರವಾಗಿ ನಮ್ಮದೊಂದು ಸೆಲ್ಯೂಟ್.
ವರದಿ: ವಿಠಲ್ ಶೃಂಗೇರಿ
7676798969
