ಶೃಂಗೇರಿ ತಾಲೂಕಿನ ನೆಮ್ಮಾರ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ನಾಡ್ ಗ್ರಾಮದ ಮಿನಿಗರಡಿ ಯಲ್ಲಿ ಚಂದ್ರಶೇಖರ ಎಂಬುವವರು ಕಳೆದ ಗುರುವಾರ 28/08/2025 ರಾತ್ರಿ ಕಾಲುಸಂಕ ದಾಟುವಾಗ ಕಾಲುಜಾರಿ ಹೊಳೆಗೆ ಬಿದ್ದಿದ್ದು ಅವರ ಮೃತದೇಹ ನಿನ್ನೆ ಪತ್ತೆಯಾಗಿದೆ.
ಹೌದು .. ಚಂದ್ರಶೇಖರ್ ಅವರು ತಮ್ಮ ಸಂಬಂಧಿಕರ ಮನೆಯಿಂದ ವಾಪಸ್ ಮನೆಗೆ ಬರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮಿನಿಗರಡಿಯ ಚಂದ್ರಶೇಖರ ಅವರ ಮನೆಯಲ್ಲಿ ಯಾರು ಇರದ ಕಾರಣ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
28/08/2025 ರಂದು ಮನೆಗೆ ತೆರಳಿದ್ದ ಚಂದ್ರಶೇಖರ ಅವರು ಮಗನ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಹಾಗಾಗಿ ಚಂದ್ರಶೇಖರ ಅವರ ಮಗ ಪಕ್ಕದ ಮನೆಯವರಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ನಂತರ ಊರಿನವರು ಚಂದ್ರಶೇಖರ ಅವರನ್ನು ಹುಡುಕುವ ಕಾರ್ಯಕ್ಕೆ ಮುಂದಾದಾಗ ಅವರು ನೆಮ್ಮಾರಿನಿಂದ ಊರಿಗೆ ಆಟೋದಲ್ಲಿ ಬಂದಿರುವ ಮಾಹಿತಿ ಲಭ್ಯವಾಗಿದ್ದು, ಎಷ್ಟೇ ಹುಡುಕಾಡಿದರು ಚಂದ್ರಶೇಖರ ಅವರ ಪತ್ತೆಯಾಗಿರಲಿಲ್ಲ. ಮಂಗಳವಾರ ಕಾಲುಸಂಕದಿಂದ ಸ್ವಲ್ಪ ದೂರದಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೂಲಭೂತ ಸೌಕರ್ಯಗಳೇ ಇಲ್ಲದೆ ಈ ರೀತಿ ಸಮಸ್ಯೆ ಎದುರಾಗಿದೆ. ಕರೆಂಟ್ ಇದ್ದರೆ ನೆಟ್ವರ್ಕ್ ಇದೆ ಅಷ್ಟೇ. ಸರಿಯಾದ ರಸ್ತೆ ಇಲ್ಲ, ಮಳೆಗಾಲದಲ್ಲಿ ನಮ್ಮೂರಿಂದ ಪಟ್ಟಣಕ್ಕೆ ಹೋಗಬೇಕಾದರೆ ಈ ಕಾಲುಸಂಕವನ್ನು ಜೀವ ಕೈಯಲ್ಲಿ ಹಿಡಿದುಕೊಂಡು ದಾಟಬೇಕು. ಅವರ ಮುತುವರ್ಜಿಯಲ್ಲೆ ನಾವೆಲ್ಲ ಇಷ್ಟು ವರ್ಷ ಕಾಲುಸಂಕ ನಿರ್ಮಿಸಿ ದಾಟುತ್ತಿದ್ದೆವು ಈಗ ಅವರ ಪರಿಸ್ಥಿತಿಯೇ ಹೀಗಾಗಿದೆ.

ಶಾಸಕರಾದ ರಾಜೇಗೌಡ ಅವರು ನಮ್ಮೂರಿಗೆ ಬಂದಾಗ ಸೇತುವೆ ಮಾಡುವ ಭರವಸೆ ನೀಡಿದ್ದರು ಆ ಭರವಸೆ ಭರವಸೆಯಾಗಿಯೇ ಉಳಿದಿದೆ. ಶಾಸಕರ ಭರವಸೆ ಈಡೇರಿದ್ದರೆ ಇವರ ಪ್ರಾಣ ಉಳಿಯುತ್ತಿತ್ತು ಎನ್ನುತ್ತಾರೆ ಗ್ರಾಮಸ್ಥರು.
ನಮ್ಮೂರಿನಲ್ಲಿ ಸುಮಾರು 30 ಮನೆಗಳಿವೆ. ನಾವು ಬೇರೆ ಊರಿಗೆ ಹೋಗಬೇಕಾದರೆ ಮಳೆಗಾಲದಲ್ಲಿ ತಾತ್ಕಾಲಿಕವಾಗಿ ನಿರ್ಮಿಸುವ ಕಾಲುಸಂಕ ದಾಟಿ ಹೋಗಬೇಕು. ಈ ಹಿಂದೆಯೂ ಕಾಲು ಜಾರಿ ಬಿದ್ದ ಪ್ರಕರಣಗಳಿವೆ ಆದರೆ ಪ್ರಾಣಪಾಯ ಆಗಿರಲಿಲ್ಲ ಅಷ್ಟೇ.
ಇನ್ನಾದರು ಶಾಸಕರು ಸಂಸದರು ಇತ್ತ ಗಮನ ಹರಿಸಿ ನಮ್ಮೂರಿಗೊಂದು ಸೇತುವೆ ನಿರ್ಮಿಸಿಕೊಟ್ಟು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರಾದ ವೆಂಕಟೇಶ್ ಮನವಿ ಮಾಡಿದರು.
ವರದಿ: ಶಶಿ ಬೆತ್ತದಕೊಳಲು
