ಉಡುಪಿ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020 ಅನ್ನು ಸಡಿಲುಗೊಳಿಸಿ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರಕಾರದ ಕ್ರಮವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಇದೇ ಡಿ.8ರ ಸೋಮವಾರದಂದು ಉಡುಪಿ ಜಟ್ಕಾ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಎಚ್ ಪಿ ಕರ್ನಾಟಕ ದಕ್ಷಿಣ ಪ್ರಾಂತ್ಯದ ಗೋ ರಕ್ಷಾ ಪ್ರಮುಖರಾದ ಸುನೀಲ್ ಕೆ.ಆರ್ ಹೇಳಿದರು.
ಮಾಧ್ಯಮದ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಹಿಂದೂ ಸಂಘಟನೆ ಹಾಗೂ ಕಾರ್ಯಕರ್ತರ ಮೇಲೆ ಸವಾರಿ ಮಾಡುವ ಕೆಲಸ ಮಾಡುತ್ತಿದೆ. ಕರಾವಳಿ ಕರ್ನಾಟಕ ಸಹಿತ ರಾಜ್ಯದ ಎಲ್ಲ ಭಾಗಗಳಲ್ಲಿ ಗೋವುಗಳನ್ನು ಕದ್ದು ಸಾಗಾಟ ಮಾಡುವುದು ಮತ್ತು ವಧೆ ಮಾಡಿ ಅಕ್ರಮವಾಗಿ ಮಾಂಸ ಮಾರಾಟ ಮಾಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಜಿಹಾದಿಗಳು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.
ರಾಜ್ಯದಲ್ಲಿ ಈವರೆಗೂ ಪ್ರಬಲವಾದ ಗೋಹತ್ಯೆ ಕಾನೂನು ಜಾರಿಯಲ್ಲಿತ್ತು. ಗೋವುಗಳನ್ನು ಕದ್ದು ಸಾಗಾಟ ಮಾಡುವವರನ್ನು ಬಂಧಿಸಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಬಲ ಕಾನೂನನ್ನು ಹಿಂದಿನ ಬಿಜೆಪಿ ಸರಕಾರ ಜಾರಿಗೊಳಿಸಿತ್ತು. ಸಿದ್ದರಾಮಯ್ಯ ಸರಕಾರ ಒಂದು ವರ್ಗವನ್ನು ಓಲೈಸುವ ಉದ್ದೇಶದಿಂದ ಕಾನೂನನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ.
ಗೋ ಕಳ್ಳರಿಗೆ, ಜಿಹಾದಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕಾನೂನು ದುರ್ಬಲಗೊಳಿಸಲು ಹೊರಟಿದೆ. ಕಾಂಗ್ರೆಸ್ ಸರಕಾರದ ಕ್ರಮವನ್ನು ಹಿಂದೂ ಸಮಾಜ ಬಲವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
