ಉಡುಪಿ : ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಸಮೀಪದ ಬಿಳಿಯಾರು ಧೂಮಾವತಿ ದೈವದ ಸನ್ನಿಧಾನಕ್ಕೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಭೇಟಿ ನೀಡಿದ್ದು, ಹಲವು ಕಾರಣಗಳಿಂದಾಗಿ ಗಮನ ಸೆಳೆದಿದೆ.
ದೈವದ ನೇಮೋತ್ಸವದ ದಿನ ಸಚಿವರು ಪತ್ನಿ ಸಮೇತ ಸನ್ನಿಧಾನಕ್ಕೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಸನ್ನಿಧಿಯಲ್ಲಿ ನಿರ್ಮಿಸಲಾದ ನೂತನ ಗೋಪುರ ಹಾಗೂ ಕಟ್ಟಡವನ್ನು ಸಚಿವರು ಉದ್ಘಾಟಿಸಿದರು.
ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವರ ಈ ಭೇಟಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಚಿವ ತಿಮ್ಮಾಪುರ್ ಅವರು ತಮ್ಮ ಆಪ್ತ ಎಂದು ಹೇಳಲಾಗುವ ಉಡುಪಿ ಜಿಲ್ಲೆಯ ಬಿಳಿಯಾರು ಮೂಲದ ಜೀವನ ಶೆಟ್ಟಿ ಅವರ ಆಹ್ವಾನದ ಮೇರೆಗೆ ಈ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಜೀವನ ಶೆಟ್ಟಿ ಸದ್ಯ ಧಾರವಾಡದಲ್ಲಿ ವೈನ್ ಮರ್ಚೆಂಟ್ ಅಸೋಸಿಯೇಷನ್‌ನ ಪದಾಧಿಕಾರಿಯಾಗಿದ್ದಾರೆ.
ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ವೈರಲ್ ಆಗಿದ್ದ ಆಡಿಯೋ ಕ್ಲಿಪ್‌ನಲ್ಲಿ ಜೀವನ ಶೆಟ್ಟಿ ಹೆಸರು ಕೇಳಿಬಂದಿದ್ದು, ಸಚಿವರ ಹೆಸರನ್ನು ಬಳಸಿಕೊಂಡು ಹಣಕ್ಕಾಗಿ ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ ಈ ಆರೋಪಗಳನ್ನು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಅವರು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.
ಇನ್ನೊಂದೆಡೆ, ಜೀವನ ಶೆಟ್ಟಿ ತಮ್ಮ ವಿರುದ್ಧ ಅನಗತ್ಯ ಆರೋಪಗಳು ಮಾಡಲಾಗುತ್ತಿದ್ದು, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
