Saturday, February 7, 2026
Homeಆಧ್ಯಾತ್ಮಉಡುಪಿ: ಕೃಷ್ಣ ಮಠದಲ್ಲಿ ಪ್ರಧಾನಿ : 4 ಸಂಕಲ್ಪಕ್ಕೆ ಕರೆ ಕೊಟ್ಟ ಮೋದಿ

ಉಡುಪಿ: ಕೃಷ್ಣ ಮಠದಲ್ಲಿ ಪ್ರಧಾನಿ : 4 ಸಂಕಲ್ಪಕ್ಕೆ ಕರೆ ಕೊಟ್ಟ ಮೋದಿ

ಉಡುಪಿ: 17 ವರ್ಷಗಳ ಬಳಿಕ ಕೃಷ್ಣನಗರಿಗೆ ಉಡುಪಿಗೆ ಪ್ರಧಾನಿ ಮೋದಿ ಅವರ ಆಗಮನವಾಗಿದೆ. 2008ರ ಮೇ 8ರಂದು ಪ್ರಧಾನಿ ಆಗುವುದಕ್ಕೂ ಮುನ್ನ ಮೊದಲ ಬಾರಿಗೆ ಆಗಮಿಸಿದ್ದರು. ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಉಡುಪಿ ಕೃಷ್ಣನ ದರ್ಶನ ಕೈಗೊಂಡಿದ್ದಾರೆ. ದ್ವಾರಕಾ ಕೃಷ್ಣನ ಊರಿನಿಂದ ಬಂದ ಪ್ರಧಾನಿ ಮೋದಿಗೆ ಪುತ್ತಿಗೆ ಶ್ರೀಗಳು ಭಾರತ ಭಾಗ್ಯವಿದಾತ ಎಂದು ಬಿರುದು ನೀಡಿದ್ದಾರೆ. ಕೃಷ್ಣಮಠ ಬೇಟಿಗೂ ಮುನ್ನ ನಡೆದ ಅದ್ದೂರಿ ರೋಡ್ ಶೋ, ಕರಾವಳಿಯಲ್ಲಿ ಹೊಸ ಸಂಚಲನ ಮೂಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಭೇಟಿ ನೀಡಿದ್ದಾರೆ. ಈ ಹಿಂದೆ ಹಲವು ಬಾರಿ ಅವರು ಉಡುಪಿಗೆ ಬಂದಿರಬಹುದು‌. ಆದರೆ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಉಡುಪಿ ಕೃಷ್ಣನ ದರ್ಶನ ಕೈಗೊಂಡಿದ್ದಾರೆ. ಕೃಷ್ಣಮಠಕ್ಕೆ ಮೋದಿ ಭೇಟಿ ಹಿನ್ನೆಲೆಯಲ್ಲಿ ಬಿಜೆಪಿ ರೋಡ್ ಶೋ ಹಮ್ಮಿಕೊಂಡಿತ್ತು. ಮಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಆದಿ ಉಡುಪಿಗೆ ಬಂದಿಳಿದ ಮೋದಿಯನ್ನು ಸ್ವಾಗತಿಸಲು ಸಾವಿರಾರು ಜನ ರಸ್ತೆಯ ಇಕ್ಕೆಲಗಳಲ್ಲಿ ಕಾದು ಕುಳಿತಿದ್ದರು. ಬಗೆ ಬಗೆಯ ವೇಷ ತೊಟ್ಟು ಸಂಭ್ರಮಿಸುತ್ತಿದ್ದರು. ಮೂರು ವೇದಿಕೆಗಳಲ್ಲಿ ಯಕ್ಷಗಾನ ಹುಲಿ ವೇಷ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಧಾನಿ ಸ್ವಾಗತಕ್ಕೆ ಸಜ್ಜಾಗಿ ಕುಳಿತಿತ್ತು. ಕಣ್ಣಾಯಿಸಿದಲ್ಲ ಮೋದಿ ಮುಖವಾಡ ಕೇಸರಿ ಬಾವುಟ…

ಆದಿಉಡುಪಿ ಹೆಲಿಪಾಡ್ನಿಂದ ಪ್ರಧಾನಿ ಮೋದಿ ಕಾರ್ ನಲ್ಲಿ ರೋಡ್ ಶೋ ಆರಂಭಿಸಿದರು. ಆದರೆ ಜನರನ್ನು ಕಂಡು ಪುಳಕಿತರಾದ ಅವರು ಕಾರ್ ನಿಂದ ಹೊರಬಂದು ಕೈಬೀಸಿದರು. ಇದೇ ಅವಕಾಶಕ್ಕೆ ಕಾಯುತ್ತಿದ್ದ ಸಾವಿರಾರು ಕಾರ್ಯಕರ್ತರು ಪುಷ್ಪಾರ್ಚನೆ ಗೈಯುವ ಮೂಲಕ ಮೋದಿಯನ್ನು ದೇವರ ನಗರಿಗೆ ಬರಮಾಡಿಕೊಂಡರು.

ಮೂರು ಸಾಂಸ್ಕೃತಿಕ ವೇದಿಕೆಗಳನ್ನು ಕಂಡು ಶುಭ ಹಾರೈಸಿದ ಪ್ರಧಾನಿ ನರೇಂದ್ರ ಮೋದಿ, ಸುಮಾರು 40 ನಿಮಿಷಗಳ ಕಾಲ ರೋಡ್ ಶೋ ನಡೆಸಿದರು. ಅಲ್ಲಿಂದ ನೇರವಾಗಿ ಎಂಟ್ರಿ ಕೊಟ್ಟದ್ದು ಕೃಷ್ಣ ಮಠಕ್ಕೆ..

ರಥ ಬೀದಿಗೆ ಬಂದ ನರೇಂದ್ರ ಮೋದಿ ಕನಕನ ಕಿಂಡಿಯಲ್ಲಿ ಕೃಷ್ಣ ದರ್ಶನ ಮಾಡಿದರು. ಸ್ವರ್ಣ ಖಚಿತ ಕಿಂಡಿಯನ್ನು ಅನಾವರಣ ಗೊಳಿಸಿದರು. ಕನಕದಾಸರಿಗೆ ಹಾರ ಸಮರ್ಪಿಸಿ ಕೈಮುಗಿದರು. ಪೂರ್ಣ ಕುಂಬ ಸ್ವಾಗತದೊಂದಿಗೆ ಪ್ರಧಾನಿಯನ್ನು ಮಠದ ಅಧಿಕಾರಿಗಳು ಬರಮಾಡಿಕೊಂಡರು. ನವಗ್ರಹ ಕಿಂಡಿಯ ಮೂಲಕ ಕೃಷ್ಣ ದರ್ಶನ ಮಾಡಿದ ನರೇಂದ್ರ ಮೋದಿ, ಸುವರ್ಣ ತೀರ್ಥ ಮಂಟಪವನ್ನು ಉದ್ಘಾಟಿಸಿದರು. ಪುತ್ತಿಗೆ ಶ್ರೀಗಳ ಸನ್ಯಾಸ ಜೀವನದ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಕೊಡುಗೆಯನ್ನು ಕೃಷ್ಣನಿಗೆ ಸಮರ್ಪಿಸಿದರು. ಪೇಜಾವರ ಶ್ರೀ ಸಹಿತ ಹಲವು ಮಠಾದೀಷರೊಂದಿಗೆ ಸಮಾಲೋಚನೆ ನಡೆಸಿದರು. ಪ್ರಧಾನಿ ಮೋದಿಗೆ ಅಂಗಾರಕ ತಿಲಕವನ್ನಿಟ್ಟು, ತುಳಸಿ ಮಣಿಯ ಹಾರ ಹಾಕಿ ತೀರ್ಥ ಪ್ರಸಾದ ಕೊಟ್ಟು ಮಠಾಧೀಶರು ಗೌರವಿಸಿದರು.

ಅಲ್ಲಿಂದ ಗೀತಾ ಮಂದಿರಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಪುತ್ತಿಗೆ ಮಠಾಧೀಶರೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿದರು.

ಪ್ರಧಾನ ವೇದಿಕೆಗೆ ಬಂದ ನರೇಂದ್ರ ಮೋದಿ, ಅಲ್ಲಿ ಸೇರಿದ್ದ ಸಾವಿರಾರು ಜನರಿಗೆ ಕೈಬೀಸಿದರು. ಚಿತ್ರ ಬರೆದು ತಂದ ಕಲಾವಿದರನ್ನು ಗೌರವಿಸಿದರು. ಪ್ರಧಾನಿ ನರೇಂದ್ರ ಮೋದಿಗೆ ಪುತ್ತಿಗೆ ಶ್ರೀಗಳು ಭಾರತ ಭಾಗ್ಯವಿದಾತ ಎಂದು ಬಿರುದು ಕೊಟ್ಟು ಗೌರವಿಸಿದರು. ಬೆಳ್ಳಿಯ ಕಡಗೋಲು ಕೊಟ್ಟು, ದೇಶ ರಕ್ಷಣೆಗೆ ಬಲ ಸಿಗಲಿ ಎಂದು ಹಾರೈಸಿದರು. ರಾಮಮಂದಿರದಲ್ಲಿ ಧ್ವಜ ಸ್ಥಾಪಿಸಿ ಕೃಷ್ಣಾರ್ಪಣೆಗೈಯಲು ಮೋದಿ ಉಡುಪಿಗೆ ಬಂದಿರುವುದಾಗಿ ಬಣ್ಣಿಸಿದರು.

ಲಕ್ಷಕಂಠ ಗೀತಾ ಪಾರಾಯಣ ಪ್ರಧಾನಿ ನರೇಂದ್ರ ಮೋದಿ ಭೇಟಿಯ ಪ್ರಧಾನ ಉದ್ದೇಶ. ಬೆಳಗ್ಗಿನಿಂದಲೇ ಸಾವಿರಾರು ಮಂದಿ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸುತ್ತಿದ್ದರು. ಗೀತೆಯ 15ನೇ ಅಧ್ಯಾಯದ ಪ್ರಮುಖ ಶ್ಲೋಕಗಳನ್ನು ನರೇಂದ್ರ ಮೋದಿ ನೆರೆದ ಸಾವಿರಾರು ಮಂದಿಯ ಜೊತೆ ಪಠಿಸಿದರು.

ಇದೆ ವೇಳೆ ಭಾವುಕರಾಗಿ ಭಾಷಣ ಆರಂಭಿಸಿದ ಪ್ರಧಾನಿ, ಗುಜರಾತ್ ನ ದ್ವಾರಕೆಯಿಂದ ಬಂದ ಕೃಷ್ಣ, ಉಡುಪಿಯಲ್ಲಿ ಆಚಾರ್ಯ ಮದ್ವರಿಂದ ಆರಾಧನೆಗೊಂಡು ವಿಶ್ವ ಪ್ರಸಿದ್ಧಿ ಪಡೆದ ಇತಿಹಾಸವನ್ನು ಸ್ಮರಿಸಿದರು. ಸ್ವಾಮೀಜಿಗಳು ಕೈಗೊಂಡಿರುವ ಕೋಟಿಗೀತಾ ಲೇಖನ ಯಜ್ಞ ಯುವ ಸಮುದಾಯಕ್ಕೆ ಗೀತೆಯನ್ನು ಪರಿಚಯಿಸುವ ಜನಾಂಧೋಲನ ಎಂದು ಬಣ್ಣಿಸಿದರು. ಅಯೋಧ್ಯ ರಾಮಮಂದಿರ ನಿರ್ಮಾಣದಲ್ಲಿ ಪೇಜಾವರ ಶ್ರೀಗಳ ಪಾತ್ರವನ್ನು ಹಾಡಿ ಹೊಗಳಿದ ನರೇಂದ್ರ ಮೋದಿ, ರಾಮಮಂದಿರದ ದ್ವಾರಕ್ಕೆ ಆಚಾರ್ಯ ಮಧ್ವರ ಹೆಸರನ್ನಿಟ್ಟು, ಶೇಷ ಗೌರವ ಸಲ್ಲಿಸಿರುವುದನ್ನು ಸ್ಮರಿಸಿದ್ದರು. ಜನಸಂಘ ಕಾಲದಿಂದ ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿರುವ ಉಡುಪಿ ನಾಗರಿಕರನ್ನು ಕೊಂಡಾಡಿದರು. ಶಾಂತಿ ಸ್ಥಾಪನೆ ಎಷ್ಟು ಮುಖ್ಯವೋ ಅದಕ್ಕಾಗಿ ದುಷ್ಟರ ಅಂತ್ಯ ಅಷ್ಟೇ ಮುಖ್ಯ ಎಂದು ಗೀತೆ ಸಂದೇಶ ನೀಡುತ್ತದೆ, ನಮ್ಮ ಸಂಕಲ್ಪ ಎಷ್ಟು ದೃಢ ಎಂಬುದನ್ನು ಆಪರೇಷನ್ ಸಿಂಧೂರ ಮೂಲಕ ತೋರಿಸಿದ್ದೇವೆ, ಹೊಸ ಭಾರತ ಯಾರ ಎದುರು ಕೂಡ ಜಗ್ಗಲ್ಲ ಎಂದರು. ಸದೃಢ ಭಾರತಕ್ಕಾಗಿ ನವ ಸಂಕಲ್ಪ ಕೈಗೊಳ್ಳೋಣ ಎಂದು, ಒಂಬತ್ತು ಬಗೆಯ ಸಂಕಲ್ಪ ಬೋಧಿಸಿದರು.

ನವಿಲಿನ ಗರಿಯ ಪೇಟೆ ತೊಟ್ಟು ಮಿಂಚಿದ ಮೋದಿಯನ್ನು ಕಾಣಲು ಸಾವಿರಾರು ಜನ ಆಗಮಿಸಿದ್ದರು. ವಿಶ್ವಗೀತಾ ಪರ್ಯಾಯಕ್ಕೆ ವಿಶ್ವನಾಯಕನ ಆಗಮನದ ಮೂಲಕ ಸಾರ್ಥಕವಾಯ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!