Saturday, February 7, 2026
Homeಜಿಲ್ಲಾಸುದ್ದಿಮಗಳು ಜನಿಸಿದ ತಿಂಗಳಲ್ಲೇ 49 ಕೋಟಿ ರೂ. ಲಾಟರಿ ಗೆದ್ದ ಶಾಂತನು ಶೆಟ್ಟಿಗಾರ್!

ಮಗಳು ಜನಿಸಿದ ತಿಂಗಳಲ್ಲೇ 49 ಕೋಟಿ ರೂ. ಲಾಟರಿ ಗೆದ್ದ ಶಾಂತನು ಶೆಟ್ಟಿಗಾರ್!

ಉಡುಪಿ: ಉಡುಪಿಯ ಯುವಕನಿಗೆ ಅಬುದಾಬಿಯಲ್ಲಿ ಜಾಕ್ ಪಾಟ್ ಹೊಡೆದಿದೆ. ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ ಬರೋಬ್ಬರಿ 49 ಕೋಟಿ ರೂಪಾಯಿ ಅದೃಷ್ಟ ಒಲಿದಿದೆ. ಉಡುಪಿ ಜಿಲ್ಲೆ ಕಾಪು ತಾಲೂಕಿನ ಮಟ್ಟು ಗ್ರಾಮದ ನಿವಾಸಿ ಶಾಂತನು ಶೆಟ್ಟಿಗಾರ್ ಈಗ ಕೋಟ್ಯಧಿಪತಿ! ಮಸ್ಕತ್ತಿನಲ್ಲಿ, ಚಿಲ್ಲರೆ ವ್ಯಾಪಾರ ಕ್ಷೇತ್ರದ ಸೇಲ್ಸ್ ವಿಭಾಗದಲ್ಲಿ ಶಾಂತನು ದುಡಿಯುತ್ತಿದ್ದಾರೆ.

ಲಾಟರಿ ಖರೀದಿಸುವುದು ಇವರ ಹವ್ಯಾಸ! 

ಅರಬ್ ದೇಶಗಳಲ್ಲಿ ದೊಡ್ಡ ದೊಡ್ಡ ಲಕ್ಕಿ ಡ್ರಾಗಳು ರಾತ್ರಿ ಬೆಳಗಾಗುವುದರಲ್ಲಿ ಜನರನ್ನು ಕೋಟ್ಯಧಿಪತಿಗಳನ್ನಾಗಿ ಮಾಡುತ್ತವೆ. ಈಗಾಗಲೇ ಭಾರತದ ಹಲವು ಯುವಕರು ಕೋಟಿ ಕೋಟಿ ಸಂಪಾದಿಸಿದ ಉದಾಹರಣೆಗಳಿವೆ. ಈ ಬಾರಿ ಸ್ನೇಹಿತನ ಜೊತೆ ಸೇರಿ 500 ದಿರ್ಹಂ ಪಾವತಿಸಿ ಶಾಂತನು ಈ ಟಿಕೆಟ್ ಖರೀದಿಸಿದ್ದರು. ಅಂದರೆ ಭಾರತೀಯ ಕರೆನ್ಸಿ ಪ್ರಕಾರ ಸುಮಾರು 12,000 ರೂಪಾಯಿಯ ಟಿಕೆಟ್ ಇದಾಗಿತ್ತು. ಈ ಬಾರಿ ಅದೃಷ್ಟ ಒಲಿದಿದ್ದು, ಬರೋಬ್ಬರಿ 49 ಕೋಟಿ ರೂಪಾಯಿ ಜಾಕ್ಪಾಟ್ ಬಹುಮಾನವಾಗಿ ಸಿಕ್ಕಿದೆ. ಬಿಗ್ ಟಿಕೆಟ್ ಲಕ್ಕಿ ಡ್ರಾ ನೇರಪ್ರಸಾರದಲ್ಲಿ ಇದನ್ನು ಘೋಷಿಸಲಾಗಿದೆ.


ಶಾಂತನು ಇಂಜಿನಿಯರಿಂಗ್ ಮಾಡುತ್ತಿದ್ದಾಗ ಅಪಘಾತದಲ್ಲಿ ತಾಯಿಯನ್ನು ಕಳೆದುಕೊಂಡಿದ್ದರು. ಬಳಿಕ ಡಿಪ್ಲೋಮಾ ಇಂಜಿನಿಯರಿಂಗ್ ಪೂರೈಸಿ ವಿದೇಶಕ್ಕೆ ಹಾರಿದರು. ಊರಿನಲ್ಲಿ ಮಟ್ಟು ಮನೆಯಲ್ಲಿದ್ದಾಗ ದೈವದ ಸೇವೆ ಮಾಡುತ್ತಿದ್ದರು. ಇದೀಗ ಮನೆಯ ದೈವ ಒಲಿದಿದೆ, ಮನೆಗೆ ಮಗಳು ದೇವಿಯಂತೆ ಬಂದಿದ್ದಾಳೆ. ಕೆಲವೇ ದಿನಗಳ ಹಿಂದೆಯಷ್ಟೇ ಶಾಂತನು ಅವರಿಗೆ ಹೆಣ್ಣು ಮಗು ಜನಿಸಿತ್ತು. ಈಗ ಮನೆಮಗಳು ಅದೃಷ್ಟಲಕ್ಷ್ಮಿಯಾಗಿ ಒಲಿದು ಬಂದಿದ್ದಾಳೆ. 49 ಕೋಟಿ ರೂಪಾಯಿಯ ಬಹುಮಾನವು ಅದೃಷ್ಟಲಕ್ಷ್ಮಿಯಾಗಿ ಖಜಾನೆ ಸೇರಿದೆ.


ತನ್ನ ಸ್ನೇಹಿತನ ಜೊತೆಗೂಡಿ ಈ ಟಿಕೆಟ್ ಖರೀದಿಸಿದ ಕಾರಣ ಬಹುಮಾನದ ಮೊತ್ತವನ್ನು ಇಬ್ಬರೂ ಹಂಚಿಕೊಳ್ಳುವುದಾಗಿ ಶಾಂತನು ತಿಳಿಸಿದ್ದಾರೆ. “ತನ್ನ ಬಹುಮಾನದ ಮೊತ್ತವನ್ನು ಹೇಗೆ ವಿನಿಯೋಗಿಸಬೇಕು ಎಂದು ಇನ್ನೂ ನಿರ್ಧರಿಸಿಲ್ಲ,” ಎಂದು ಕುಟುಂಬದವರಿಗೆ ಹೇಳಿದ್ದಾರೆ. ಅದೃಷ್ಟವಾಗಿ ಬಂದ ಹಣವನ್ನು ಶಾಂತನು ಚೆನ್ನಾಗಿ ವಿನಿಯೋಗಿಸಲಿ ಎಂದು ಮನೆ ಹಿರಿಯರು ಆಶೀರ್ವದಿಸಿದ್ದಾರೆ. ಕೆಲವೇ ದಿನಗಳಲ್ಲಿ ಶಾಂತನು ತವರಿಗೆ ಮರಳಲಿದ್ದಾರೆ. ಹಗಲಿರುಳು ಶ್ರಮಿಸುವ ಶ್ರಮಜೀವಿ ಯುವಕನೊಬ್ಬ ಕೋಟ್ಯಧಿಪತಿಯಾದ ಈ ಕಥೆ ನಿಜಕ್ಕೂ ಕರಾವಳಿಯಲ್ಲಿ ಸಂಚಲನ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!