ಬೆಂಗಳೂರು: ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬಂದ ಕೂಡಲೇ ತೋಟದ ಬೆಳೆಗಾರರ ಸಂಘಟನೆ ಮತ್ತು ಕಾರ್ಮಿಕ ಸಂಘಟನೆಗಳಿಗೆ, ಸ್ಥಳೀಯ ಮುಖಂಡರಿಗೆ ಮಾಹಿತಿ ರವಾನಿಸಲು ಕ್ರಮ ವಹಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಚಿಕ್ಕಮಗಳೂರು ತಾಲೂಕು ಹುಣಸೆಹಳ್ಳಿ ಬಳಿಯ ತೋಟದಲ್ಲಿ ಕಳೆದ 7 ದಿನಗಳ ಅಂತರದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಉನ್ನತಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ ಸಚಿವರು, ವನ್ಯಜೀವಿ -ಮಾನವ ಸಂಘರ್ಷ ಇರುವ ಪ್ರದೇಶಗಳ ಸ್ಥಳೀಯ ಮುಖಂಡರ, ಗ್ರಾಮಗಳ ಜಮೀನು ಮಾಲೀಕರ ವಾಟ್ಸಾಪ್ ಗ್ರೂಪ್ ಮಾಡಿ ಮಾಹಿತಿ ಪ್ರಸಾರ ಮಾಡುವಂತೆ ಸೂಚಿಸಿದರು.
ಮಾನವ-ವನ್ಯಜೀವಿ ಸಂಘರ್ಷ ವಲಯಗಳಲ್ಲಿರುವ ಗ್ರಾಮಗಳಲ್ಲಿ ಸ್ಥಳೀಯ ನಾಯಕರು ಮತ್ತು ಭೂಮಾಲೀಕರಿಗೆ ಮಾಹಿತಿಯ ತ್ವರಿತ ಪ್ರಸರಣಕ್ಕೆ ಅನುಕೂಲವಾಗುವಂತೆ ವಾಟ್ಸಾಪ್ ಗುಂಪುಗಳನ್ನು ರಚಿಸುವಂತೆ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಾನವ ಜೀವ ಅತ್ಯಮೂಲ್ಯವಾದ್ದು. ಒಂದು ಜೀವಹಾನಿ ಆದ ಬಳಿಕ ಮತ್ತೊಂದು ಜೀವಹಾನಿ ಆಗಿರುವುದು ಅತ್ಯಂತ ನೋವಿನ ಸಂಗತಿ. ಅಧಿಕಾರಿಗಳು ಮತ್ತು ಸಿಬ್ಬಂದಿ ಇಂತಹ ಘಟನೆ ಮರುಕಳಿಸದಂತೆ 24*7 ನಿಗಾ ಇಡಬೇಕು. ಕಡ್ಡಾಯವಾಗಿ ಸೆಕ್ಷನ್ 144 ಜಾರಿ ಮಾಡಿ ವನ್ಯಜೀವಿ ಸರೆ ಕಾರ್ಯಾಚರಣೆ ನಡೆಸಬೇಕು. ಅತ್ಯಾಧುನಿಕ ಸಲಕರಣೆಗಳಾದ ಥರ್ಮಲ್ ಡ್ರೋನ್ ಬಳಕೆ ಮಾಡಬೇಕು ಎಂದು ಸೂಚಿಸಿದರು
ಚಿಕ್ಕಮಗಳೂರಿನಲ್ಲಿ ಕಳೆದ ವಾರ ಆನೆ ದಾಳಿಯಿಂದ ವ್ಯಕ್ತಿ ಮೃತಪಟ್ಟ ಬಳಿಕ, ಆನೆ ಸೆರೆಗೆ ಕ್ರಮ ಕೈಗೊಳ್ಳಲಾಗಿತ್ತು. ಸ್ಥಳೀಯರಿಗೆ ತೋಟಕ್ಕೆ ಹೋಗದಂತೆ ಮಾಹಿತಿ ನೀಡಲಾಗಿತ್ತು. ಆದಾಗ್ಯೂ ತೋಟಕ್ಕೆ ಹೋದ ಕಾರಣ ಈ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.
ಅರಣ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದ ಬಳಿಕವೂ ತೋಟದ ಮಾಲೀಕರು ಕಾರ್ಮಿಕರನ್ನು ತೋಟಕ್ಕೆ ಕಳಿಸಿದರೆ ಅಂತಹ ಮಾಲೀಕರಿಗೆ ಎಚ್ಚರಿಕೆ ನೀಡಿ, ತೋಟದ ಮಾಲೀಕರಿಗೂ ಜವಾಬ್ದಾರಿ ಇರಬೇಕು. ನಿರ್ಲಕ್ಷ್ಯ ತೋರಿದರೆ ದೂರು ದಾಖಲಿಸಿ ಎಂದು ಹೇಳಿದರು.
ಮಾಹಿತಿಯ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯದ ಹೊರಗೆ 35 ಆನೆಗಳು 3 ಗುಂಪಿನಲ್ಲಿ ಸಂಚರಿಸುತ್ತಿದ್ದು, ಬೇಸಿಗೆಯಲ್ಲಿ ಅವುಗಳು ಕಾಡಿನಿಂದ ಹೊರಬರುವುದು ಸಾಮಾನ್ಯ. ಅದಾಗ್ಯೂ ಸಿಬ್ಬಂದಿ ಮತ್ತು ಅಧಿಕಾರಿಗಳು ವನ್ಯಜೀವಿ-ಮಾನವ ಸಂಘರ್ಷ ಆಗದಂತೆ ನಿಗಾ ಇಡಬೇಕು. ಪ್ರತಿ ವರ್ಷ ವನ್ಯಜೀವಿ – ಮಾನವ ದಾಳಿಯಲ್ಲಿ ಆಗುತ್ತಿರುವ ಸಾವಿನ ಸಂಖ್ಯೆ ಇಳಿಕೆಯಾಗಬೇಕೇ ಹೊರತು, ಹೆಚ್ಚಳ ಆಗಬಾರದು ನೀವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಸೂಚಿಸಿದರು
