ಚಿಕ್ಕಮಗಳೂರು: ಕುಡಿದು ವಾಹನ ಚಲಾಯಿಸುತ್ತಿದ್ದ ಯುವಕನೊಬ್ಬ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ನೂಕಾಡಿ-ತಳ್ಳಾಡಿ ಬೆದರಿಕೆ ಹಾಕಿದ ಘಟನೆ ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಮದ್ಯ ಸೇವಿಸಿ ಕಾರು ಚಲಾಯಿಸಿಕೊಂಡು ಬಂದಿದ್ದ ಯುವಕ ಮತ್ತೊಂದು ವಾಹನಕ್ಕೆ ಟಚ್ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ವೇಳೆ ಟಚ್ ಆದ ವಾಹನದ ಮಾಲೀಕರು ಪ್ರಶ್ನಿಸಲು ಬಂದಿದ್ದು, ಅವರ ಮೇಲೂ ಯುವಕ ಹಲ್ಲೆಗೆ ಮುಂದಾಗಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಬಂದ ಪೊಲೀಸ್ ಪೇದೆ ವಾಹನವನ್ನು ಅಡ್ಡ ಹಾಕಿ, ಕಾರಿನ ಕೀ ತೆಗೆದುಕೊಳ್ಳಲು ಮುಂದಾದಾಗ ಯುವಕ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ.
*“ಪೊಲೀಸರಿಗೆ ನಾನು ಹೇಗೆ ಮಾತನಾಡ್ತೀನಿ ಗೊತ್ತಾ… ನನ್ನದ್ದೇನು ಕಿತ್ತುಕೊಳ್ಳೋಕೆ ಆಗಲ್ಲ”* ಎಂದು ಅವಾಜ್ ಹಾಕಿದ್ದಲ್ಲದೆ, *“ಸುಮ್ನೆ ಹೋಗಲೇ”* ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ, ಕರ್ತವ್ಯದಲ್ಲಿದ್ದ ಪೊಲೀಸರಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಬೈದು, ನೂಕಾಡಿ-ತಳ್ಳಾಡಿ ಬೆದರಿಕೆ ಹಾಕಿರುವ ದೃಶ್ಯಗಳು ಸದ್ಯ ಚರ್ಚೆಗೆ ಗ್ರಾಸವಾಗಿವೆ.
ಯುವಕ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಿವಾಸಿ ಎಂದು ತಿಳಿದುಬಂದಿದ್ದು, ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
