ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ರುತ್ ಸೋಶಿಯಲ್ (Truth Social) ಖಾತೆಯಲ್ಲಿ ವಿಕಿಪೀಡಿಯಾ ಪುಟದ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರ ಭಾವಚಿತ್ರದ ಕೆಳಗೆ ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಎಂಬ ಪದನಾಮವಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ಪೋಸ್ಟ್‌ನಲ್ಲಿ ಟ್ರಂಪ್ ಅವರ ಅಧಿಕೃತ ಭಾವಚಿತ್ರವಿದ್ದು, ಅದರ ಕೆಳಗೆ “ವೆನೆಜುವೆಲಾದ ಹಂಗಾಮಿ ಅಧ್ಯಕ್ಷ, ಜನವರಿ 2026 ರಲ್ಲಿ ಅಧಿಕಾರ ವಹಿಸಿಕೊಂಡವರು” ಎಂದು ಬರೆಯಲಾಗಿದೆ. ನಂತರ ಅವರನ್ನು ಅಮೆರಿಕದ 45ನೇ ಮತ್ತು 47ನೇ ಅಧ್ಯಕ್ಷರನ್ನಾಗಿ ಉಲ್ಲೇಖಿಸಲಾಗಿದೆ. ಸದ್ಯ ವಿಕಿಪೀಡಿಯಾ ಪುಟದಲ್ಲಿ ಈ ಪದನಾಮವನ್ನು ಅಳಿಸಿಹಾಕಿ, ಮತ್ತೆ ಸಂಪಾದಿಸಲಾಗಿದೆ ಎಂದು ತಿಳಿದುಬಂದಿದೆ.
ಅಮೆರಿಕದ ಪಡೆಗಳು ವೆನೆಜುವೆಲಾದ ಮೇಲೆ ಬೃಹತ್ ದಾಳಿ ನಡೆಸಿ, ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದ ನಂತರ, “ಸುರಕ್ಷಿತ ಪರಿವರ್ತನೆಯಾಗುವವರೆಗೆ ಅಮೆರಿಕವೇ ವೆನೆಜುವೆಲಾವನ್ನು ಆಳಲಿದೆ” ಎಂದು ಟ್ರಂಪ್ ಪ್ರತಿಪಾದಿಸಿದ್ದರು. ಮಡುರೊ ದಂಪತಿಯನ್ನು ನ್ಯೂಯಾರ್ಕ್‌ಗೆ ಕರೆತರಲಾಗಿದ್ದು, ಅಲ್ಲಿ ಅವರ ಮೇಲೆ ಮಾದಕವಸ್ತು ಹಾಗೂ ಭಯೋತ್ಪಾದನಾ ಪಿತೂರಿಯ ಆರೋಪದಡಿ ವಿಚಾರಣೆ ನಡೆಯುತ್ತಿದೆ.
ಈ ತಿಂಗಳ ಆರಂಭದಲ್ಲಿ ಅಮೆರಿಕ ನಡೆಸಿದ “ದೊಡ್ಡ ಪ್ರಮಾಣದ” ಕಾರ್ಯಾಚರಣೆಯಲ್ಲಿ ವೆನೆಜುವೆಲಾ ನಾಯಕ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಲಾಗಿತ್ತು. ಮಡುರೊ ಬಂಧನದ ಕೆಲವೇ ಗಂಟೆಗಳ ನಂತರ ಪ್ರತಿಕ್ರಿಯಿಸಿದ್ದ ಟ್ರಂಪ್, “ವೆನೆಜುವೆಲಾದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳದ ಬೇರೆ ಯಾರೋ ದೇಶವನ್ನು ವಶಪಡಿಸಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ. ಅಲ್ಲಿ ಸುಗಮ ಆಡಳಿತ ವ್ಯವಸ್ಥೆ ಜಾರಿಗೆ ಬರುವವರೆಗೆ ಅಮೆರಿಕವೇ ಉಸ್ತುವಾರಿ ವಹಿಸಲಿದೆ” ಎಂದಿದ್ದರು.
ಇದೇ ವೇಳೆ, ವೆನೆಜುವೆಲಾದ ಉಪಾಧ್ಯಕ್ಷೆ ಹಾಗೂ ತೈಲ ಸಚಿವೆ ಡೆಲ್ಸಿ ರೊಡ್ರಿಗಸ್ ಕಳೆದ ವಾರವಷ್ಟೇ ದೇಶದ ಮಧ್ಯಂತರ ಅಧ್ಯಕ್ಷರಾಗಿ ಔಪಚಾರಿಕವಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮತ್ತೊಂದೆಡೆ, ವೆನೆಜುವೆಲಾವು 30 ರಿಂದ 50 ಮಿಲಿಯನ್ ಬ್ಯಾರೆಲ್ ತೈಲವನ್ನು ವಾಷಿಂಗ್ಟನ್‌ಗೆ ನೀಡುವ ಒಪ್ಪಂದವನ್ನು ಟ್ರಂಪ್ ಘೋಷಿಸಿದ್ದಾರೆ. ಈ ತೈಲವನ್ನು ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಿ ಬರುವ ಹಣವನ್ನು ಎರಡೂ ದೇಶಗಳ ಜನರ ಹಿತಕ್ಕಾಗಿ ಬಳಸಲಾಗುವುದು ಮತ್ತು ಇದರ ನಿಯಂತ್ರಣ ಅಮೆರಿಕ ಅಧ್ಯಕ್ಷರ ಬಳಿ ಇರಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
