ಬೆಂಗಳೂರು: ಶೌಚಾಲಯಕ್ಕೆ ಹೋಗಬೇಕೆಂದು ಒಂಟಿ ಮಹಿಳೆಯ ಮನೆಗೆ ಬಲವಂತವಾಗಿ ನುಗ್ಗಿ, ಆಕೆಯೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಡೆಲಿವರಿ ಬಾಯ್ ಒಬ್ಬನನ್ನ ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹೌದು, ನಗರದಲ್ಲಿ ಪಾರ್ಸೆಲ್ ನೀಡಲು ಬಂದ ಇ-ಕಾಮರ್ಸ್ ಸಂಸ್ಥೆಯೊಂದರ ಡೆಲಿವರಿ ಬಾಯ್ ಶೌಚಾಲಯ ಬಳಸುವ ನೆಪದಲ್ಲಿ ಮಹಿಳೆಯೊಬ್ಬರ ಮನೆಗೆ ಬಲವಂತವಾಗಿ ನುಗ್ಗಿ ಅಸಭ್ಯವಾಗಿ ವರ್ತಿಸಿದ್ದಾನೆ. ಈದರಿಂದ ಮನನೊಂದ ಮಹಿಳೆ ಸಾಮಾಜಿಕ ಜಾಲತಾಣದ ಮೂಲಕ ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಹಿನ್ನೆಲೆ ಫ್ಲಿಪ್ಕಾರ್ಟ್ ಡೆಲಿವರಿ ಬಾಯ್ ವಿಜಯ್ ಮಲ್ಲಿಕಾರ್ಜುನ್ ಕಾಮತ್ನನ್ನು ಮಾರತಹಳ್ಳಿ ಪೊಲೀಸರು ತಕ್ಷಣವೇ ಬಂಧಿಸಿದ್ದಾರೆ.
ಆನ್ಲೈನ್ ಆರ್ಡರ್ ನೀಡಲು ಬಂದಿದ್ದ ಡೆಲಿವರಿ ಬಾಯ್ ಒಬ್ಬ ಒಂಟಿಯಾಗಿರುವ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಪಾರ್ಸೆಲ್ ನೀಡಲು ಬಂದಿದ್ದ ಡೆಲಿವರಿ ಬಾಯ್ ವಾಶ್ರೂಮ್ ಬಳಸಲು ಅನುಮತಿ ಕೇಳಿದ. ಆದರೆ, ಯುವತಿ ಅಪರಿಚಿತರನ್ನು ಮನೆಗೆ ಪ್ರವೇಶಿಸಲು ಬಿಡುವುದಿಲ್ಲ ಮತ್ತು ಪಕ್ಕದಲ್ಲಿರುವ ಪುರುಷರನ್ನು ಕೇಳಬೇಕೆಂದು ಹೇಳಿದಳು. ಯುವತಿ ಪದೇ ಪದೇ ಬೇಡಿಕೊಂಡರೂ, ಅವನು ತನ್ನ ಸ್ಯಾಂಡಲ್ಗಳನ್ನು ತೆಗೆದು ಬಲವಂತವಾಗಿ ಮನೆಯೊಳಗೆ ನುಗ್ಗಿದ್ದಾನೆ. ವಾಶ್ರೂಮ್ಗೆ ಹೋದನು. ವಾಶ್ರೂಮ್ನಿಂದ ಹೊರಬಂದ ತಕ್ಷಣ ತನ್ನ ಖಾಸಗಿ ಭಾಗಗಳನ್ನು ತೋರಿಸಿದ್ದಾನೆ. ಇದರಿಂದ ಯುವತಿ ಆಘಾತಕ್ಕೊಳಗಾದಳು.
ಇನ್ನು, ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಬೆಂಗಳೂರು ನಗರ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮಹಿಳೆಯಿಂದ ಅಗತ್ಯ ವಿವರಗಳನ್ನು ಪಡೆದುಕೊಂಡು, ಆರೋಪಿ ಡೆಲಿವರಿ ಬಾಯ್ ಬಂಧಿಸಿದ್ದಾರೆ.
