Thursday, November 19, 2026
Homeಗ್ರೇಟರ್ ಬೆಂಗಳೂರುಕೆ.ಜೆ. ಜಾರ್ಜ್ ಕನಸಿನ ₹436 ಕೋಟಿ ಸಮಗ್ರ ಸಂಚಾರ ಯೋಜನೆಗೆ ಸಿಎಂ ಡಿ.ಕೆ. ಶಿವಕುಮಾರ್ ಶಿಲಾನ್ಯಾಸ

ಕೆ.ಜೆ. ಜಾರ್ಜ್ ಕನಸಿನ ₹436 ಕೋಟಿ ಸಮಗ್ರ ಸಂಚಾರ ಯೋಜನೆಗೆ ಸಿಎಂ ಡಿ.ಕೆ. ಶಿವಕುಮಾರ್ ಶಿಲಾನ್ಯಾಸ

Telegram Group
Join Now

ಬೆಂಗಳೂರು: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಸಂಚಾರ ದಟ್ಟಣೆಗೆ ದೀರ್ಘಕಾಲೀನ ಪರಿಹಾರ ನೀಡುವ ಉದ್ದೇಶದ ಸುಮಾರು ₹436 ಕೋಟಿ ವೆಚ್ಚದ ಸಮಗ್ರ ಸಂಚಾರ ಮೂಲಸೌಕರ್ಯ ಯೋಜನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು.

ಮಾರುತಿ ಸೇವಾನಗರ ಮುಖ್ಯರಸ್ತೆಯ ಐಒಸಿ ಜಂಕ್ಷನ್‌ನಲ್ಲಿ ಬೆಂಗಳೂರಿನ ಮೊದಲ ಎಲಿವೇಟೆಡ್ ವೃತ್ತಾಕಾರದ ರೋಟರಿ ಫ್ಲೈಓವರ್ ಹಾಗೂ ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಹೆಚ್ಚುವರಿ ನಾಲ್ಕು ಪಥದ ರೈಲ್ವೆ ಮೇಲ್ಸೇತುವೆ ಸೇರಿದಂತೆ ಹಲವು ಕಾಮಗಾರಿಗಳನ್ನು ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಯುವ ಕಾಂಗ್ರೆಸ್‌ ಮುಖಂಡರಾದ ರಾಣಾ ಜಾರ್ಜ್ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು.

ಯೋಜನೆಯ ವಿವರಗಳನ್ನು ಪರಿಶೀಲಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಐಒಸಿ ಜಂಕ್ಷನ್‌ನ ಸಂಚಾರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕೆ.ಜೆ. ಜಾರ್ಜ್ ನಿರಂತರವಾಗಿ ಒತ್ತಾಯಿಸಿದ್ದರು ಎಂದು ಹೇಳಿದರು.

“ಈ ಜಂಕ್ಷನ್‌ನ ಸಮಸ್ಯೆ ಕುರಿತು ಕೆ.ಜೆ. ಜಾರ್ಜ್ ಸುಮಾರು 20 ಬಾರಿ ನನ್ನ ಗಮನ ಸೆಳೆದು, ದೊಡ್ಡ ಮಟ್ಟದ ಯೋಜನೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದರು. ಇಂದು ಅದರ ಶಿಲಾನ್ಯಾಸ ನೆರವೇರಿಸಿದ್ದೇವೆ. ಪ್ರತಿಯೊಬ್ಬ ನಾಗರಿಕನ ಸಮಯಕ್ಕೂ ಮೌಲ್ಯವಿದೆ. ಜನರಿಗೆ ಉತ್ತಮ ಮೂಲಸೌಕರ್ಯ ಒದಗಿಸುವ ವಿಷಯದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಮುಂದಿನ 25 ವರ್ಷಗಳ ಸಂಚಾರ ಬೇಡಿಕೆಗೆ ಪರಿಹಾರ
ಐಒಸಿ ಜಂಕ್ಷನ್‌ನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ಮುಂದಿನ 25 ವರ್ಷಗಳ ಸಂಚಾರ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ರೂಪಿಸಲಾಗಿದೆ.

ನಾಲ್ಕು ಪಥದ ಎಲಿವೇಟೆಡ್ ರೋಟರಿ ಫ್ಲೈಓವರ್ ಅನ್ನು ಆಧುನಿಕ ಸ್ಟೀಲ್ ಬಾಕ್ಸ್ ಗರ್ಡರ್ ತಂತ್ರಜ್ಞಾನದಲ್ಲಿ ನಿರ್ಮಿಸಲಾಗುತ್ತಿದ್ದು, ಗಂಟೆಗೆ ಸುಮಾರು 4,100 Passenger Car Units (PCUs) ಸಂಚಾರ ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ.

ಬಾಣಸವಾಡಿ ರಸ್ತೆ, ಕಮ್ಮನಹಳ್ಳಿ ರಸ್ತೆ, ಮಾರುತಿ ಸೇವಾನಗರ ರಸ್ತೆ ಹಾಗೂ ಹಳೆ ಮದ್ರಾಸ್ ರಸ್ತೆ–ಇಂದಿರಾನಗರ–ಬೈಯಪ್ಪನಹಳ್ಳಿ ಟರ್ಮಿನಲ್ ದಿಕ್ಕುಗಳಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ರ್ಯಾಂಪ್‌ಗಳನ್ನು ಕಲ್ಪಿಸಲಾಗುತ್ತದೆ.

ಈ ವ್ಯವಸ್ಥೆಯಿಂದ ನಾಲ್ಕೂ ದಿಕ್ಕುಗಳಿಂದ ಬರುವ ವಾಹನಗಳು ಜಂಕ್ಷನ್‌ನಲ್ಲಿ ಅನಗತ್ಯವಾಗಿ ಕಾಯದೆ ಸುಗಮವಾಗಿ ಸಂಚರಿಸಲು ಸಾಧ್ಯವಾಗಲಿದೆ.

ಬೈಯಪ್ಪನಹಳ್ಳಿಯಲ್ಲಿ ಹೆಚ್ಚುವರಿ ನಾಲ್ಕು ಪಥದ ರೈಲ್ವೆ ಮೇಲ್ಸೇತುವೆ

ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಸಂಖ್ಯೆ 136A ಬಳಿ ರೈಲು ಸಂಚಾರದ ವೇಳೆ ವಾಹನಗಳು ದೀರ್ಘಕಾಲ ಕಾಯುವುದನ್ನು ತಪ್ಪಿಸಲು, ಈಗಿರುವ ಎರಡು ಪಥದ ರೈಲ್ವೆ ಮೇಲ್ಸೇತುವೆಗೆ ಹೆಚ್ಚುವರಿಯಾಗಿ ನಾಲ್ಕು ಪಥದ ಹೊಸ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ.

ಪಾದಚಾರಿಗಳ ಸುರಕ್ಷತೆ ಹಾಗೂ *ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್*ಗೆ ಸುಲಭ ಸಂಪರ್ಕಕ್ಕಾಗಿ ರೈಲ್ವೆ ಹಳಿಗಳ ಕೆಳಗೆ ಪಾದಚಾರಿ ಅಂಡರ್‌ಪಾಸ್ ನಿರ್ಮಾಣವನ್ನೂ ಯೋಜಿಸಲಾಗಿದೆ.

24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ

ಈ ಸಮಗ್ರ ಯೋಜನೆಯನ್ನು Bengaluru Smart Infrastructure Limited (B-SMILE) ಮೂಲಕ EPC ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಯೋಜನೆಯಲ್ಲಿ ಎಲಿವೇಟೆಡ್ ರೋಟರಿ ಫ್ಲೈಓವರ್, ಹೆಚ್ಚುವರಿ ನಾಲ್ಕು ಪಥದ ರೈಲ್ವೆ ಮೇಲ್ಸೇತುವೆ, ಸಂಪರ್ಕ ರಸ್ತೆಗಳು, ಸರ್ವಿಸ್ ರಸ್ತೆಗಳು ಹಾಗೂ ಪಾದಚಾರಿ ಅಂಡರ್‌ಪಾಸ್ ಒಳಗೊಂಡಿವೆ.

ಯೋಜನೆಗೆ ಚಾಲನೆ ದೊರೆತಿರುವುದಕ್ಕೆ ಸಚಿವ ಕೆ.ಜೆ. ಜಾರ್ಜ್ ಹರ್ಷ ವ್ಯಕ್ತಪಡಿಸಿದ್ದಾರೆ, ಸರ್ವಜ್ಞನಗರ ಮಾತ್ರವಲ್ಲದೆ ವಿಮಾನ ನಿಲ್ದಾಣ, ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್ ಹಾಗೂ ಪ್ರಮುಖ ಸಂಪರ್ಕ ರಸ್ತೆಗಳನ್ನು ಬಳಸುವ ಲಕ್ಷಾಂತರ ಜನರಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ ಎಂದರು.

“ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ನಮಗೆ ವಿಶೇಷ ಕಾಳಜಿ ಇದೆ. ನಗರದ ಸಂಚಾರ ಸಮಸ್ಯೆಗಳಿಗೆ ವೈಜ್ಞಾನಿಕ ಹಾಗೂ ದೀರ್ಘಕಾಲೀನ ಪರಿಹಾರ ನೀಡಬೇಕು ಎಂಬುದು ನಮ್ಮ ಉದ್ದೇಶ. ಮಾರುತಿ ಸೇವಾನಗರ–ಐಒಸಿ ಜಂಕ್ಷನ್‌ನ ರೋಟರಿ ಫ್ಲೈಓವರ್ ನಿರ್ಮಾಣದಿಂದ ಲಕ್ಷಾಂತರ ವಾಹನ ಸವಾರರು, ವಿಮಾನ ಪ್ರಯಾಣಿಕರು ಹಾಗೂ ರೈಲ್ವೆ ಪ್ರಯಾಣಿಕರ ಸಂಚಾರ ಸುಗಮವಾಗಲಿದೆ. ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಜನರ ಜೀವನಮಟ್ಟವನ್ನು ಉತ್ತಮಪಡಿಸುವುದೇ ನಮ್ಮ ಗುರಿ,” ಎಂದು ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!