ಬೆಂಗಳೂರು: ಕಿರುಪರದೆಗಳ ಮೋಹಕ್ಕೆ ಸಿಲುಕಿ, ಕೃತಕ ಬುದ್ಧಿಮತ್ತೆಯ ಡಿಜಿಟಲ್ ಲೋಕದಲ್ಲಿ ಮುಳುಗುತ್ತಿರುವ ಇಂದಿನ ಕಾಲಘಟ್ಟದಲ್ಲಿ, ‘ಅಲಂಕೃತ್’ ನೃತ್ಯ ಸಂಸ್ಥೆಯ ಕಲಾವಿದೆಯರು ತಮ್ಮ ಲಾಲಿತ್ಯಪೂರ್ಣ ಹೆಜ್ಜೆಗಳು, ಅದಮ್ಯ ಉತ್ಸಾಹ ಹಾಗೂ ಮನಮೋಹಕ ಅಭಿನಯದ ಮೂಲಕ ಪ್ರೇಕ್ಷಕರನ್ನು ಐದು ದಶಕಗಳ ಹಿಂದಿನ ಸುಮಧುರ ನೆನಪುಗಳ ಲೋಕಕ್ಕೆ ಕರೆದೊಯ್ದರು. ಕಳೆದ ಶನಿವಾರ ಸಂಜೆ ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಮೀನಾಕ್ಷಿ ರಂಗಮಂಚ ಸಭಾಂಗಣದಲ್ಲಿ, ವಿದುಷಿ ಪೂರ್ಣ ಆಚಾರ್ಯ ಅವರ ಸಾರಥ್ಯದಲ್ಲಿ ಅಲಂಕೃತ್ ಸಂಸ್ಥೆ ಆಯೋಜಿಸಿದ್ದ ‘ಸದಾಬಹಾರ್ ನೃತ್ಯೋತ್ಸವ–2026’ ಪ್ರೇಕ್ಷಕರ ಮನಸೂರೆಗೊಂಡಿತು (Sadaa Bahaar Nrityotsava 2026).
ಬಾಲಿವುಡ್‌ನ ಸುವರ್ಣಯುಗದ ಮಧುರ ಗೀತೆಗಳು ವೇದಿಕೆಯ ಮೇಲೆ ಮತ್ತೆ ಜೀವತಳೆದವು. ಆಕರ್ಷಕ ನೃತ್ಯ ಸಂಯೋಜನೆ, ನಿಖರ ಹೆಜ್ಜೆಗಳು, ಭಾವಪೂರ್ಣ ಅಭಿವ್ಯಕ್ತಿ ಹಾಗೂ ಕಲಾವಿದೆಯರ ಅಪರಿಮಿತ ಉತ್ಸಾಹ ಕಾರ್ಯಕ್ರಮಕ್ಕೆ ವಿಶಿಷ್ಟ ಮೆರುಗು ನೀಡಿದವು. ಆಧುನಿಕ ಡಿಜಿಟಲ್ ಯುಗದ ಏಕತಾನತೆಯ ನಡುವೆ ಈ ಪ್ರದರ್ಶನ ತಂಗಾಳಿಯಂತೆ ಆಹ್ಲಾದಕರ ಅನುಭವ ನೀಡಿತು.

ಗುರು–ಶಿಷ್ಯ ಪರಂಪರೆಯ ಕಲಾವೈಭವ: ಕಾರ್ಯಕ್ರಮವನ್ನು ಉದ್ಘಾಟಿಸಿದ ಪಂಡಿತ್ ಸತೀಶ್ ಹಂಪಿಹೊಳಿ ಮಾತನಾಡಿ, “ಗುರು–ಶಿಷ್ಯ ಪರಂಪರೆಗೆ ತನ್ನದೇ ಆದ ಶ್ರೇಷ್ಠ ಇತಿಹಾಸವಿದೆ. ಕಲಾವಿದೆಯೂ ಸಂಘಟಕರೂ ಆಗಿರುವ ಪೂರ್ಣ ಆಚಾರ್ಯ ಅವರು ಈ ಕಾರ್ಯಕ್ರಮವನ್ನು ವಿನೂತನವಾಗಿ ನೃತ್ಯ ಸಂಯೋಜಿಸಿದ್ದಾರೆ. ಕಲೆಯೆಡೆಗಿನ ಅವರ ಆಳವಾದ ಸ್ಪಂದನೆ ಮತ್ತು ಬದ್ಧತೆಯೇ ಅವರನ್ನು ಪರಿಪೂರ್ಣ ಕಲಾವಿದೆಯನ್ನಾಗಿ ರೂಪಿಸಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿದುಷಿ ಪೂರ್ಣ ಆಚಾರ್ಯ, ಶ್ರೀರಾಮದಾಸ ಆಚಾರ್ಯ, ಯಶವಂತ ರಾವ್, ಉದಯಕುಮಾರ್, ಭಾಸ್ಕರ್, ನಟಿ ರಾಧಿಕಾ ನಾರಾಯಣ್ ಹಾಗೂ ಖ್ಯಾತ ವಿದ್ವಾಂಸರಾದ ಜಗದೀಶ ಶರ್ಮಾ ಸಂಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವೈವಿಧ್ಯತೆಯಲ್ಲಿ ಏಕಸೂತ್ರತೆ: ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಖ್ಯಾತ ವಿದ್ವಾಂಸರಾದ ಜಗದೀಶ ಶರ್ಮಾ ಸಂಪ, “ಪ್ರಸ್ತುತಿಯಲ್ಲಿ ವೈವಿಧ್ಯತೆಯಿತ್ತು; ಅದನ್ನು ಬೆಸೆಯುವ ಏಕಸೂತ್ರತೆಯೂ ಇತ್ತು. ಬಣ್ಣ, ನೃತ್ಯ, ಹಾಡು ಮತ್ತು ಸಂಗೀತ- ಪ್ರತಿಯೊಂದು ಅಂಶವೂ ವಿಭಿನ್ನವಾಗಿದ್ದರೂ, ವಿದುಷಿ ಪೂರ್ಣ ಆಚಾರ್ಯ ಅವರ ಸಮರ್ಥ ಸಂಯೋಜನೆಯಲ್ಲಿ ಇಡೀ ಕಾರ್ಯಕ್ರಮ ಪರಿಪೂರ್ಣ ಕಲಾಕೃತಿಯಾಗಿ ಮೂಡಿಬಂದಿತು,” ಎಂದು ಬಣ್ಣಿಸಿದರು.

ಪ್ರತಿಯೊಂದು ಹಾಡು, ಹೆಜ್ಜೆ ಮತ್ತು ಭಾವವೂ ಪ್ರೇಕ್ಷಕರ ಹೃದಯದಲ್ಲಿ ಹಳೆಯ ನೆನಪುಗಳನ್ನು ಮರುಕಳಿಸಿತು. ಹಿರಿಯರು ತಮ್ಮ ಯೌವನದ ದಿನಗಳಿಗೆ ಮರಳಿದರೆ, ಹೊಸ ತಲೆಮಾರಿನವರು ಬಾಲಿವುಡ್‌ನ ಸುವರ್ಣಯುಗದ ಸಂಗೀತ ಮತ್ತು ನೃತ್ಯ ವೈಭವವನ್ನು ಕಣ್ತುಂಬಿಕೊಂಡರು. ಕಲಾವಿದೆಯರ ಪ್ರದರ್ಶನ ಇಡೀ ಸಭಾಂಗಣವನ್ನು ಸಂಭ್ರಮ, ಭಾವುಕತೆ ಮತ್ತು ನಾಸ್ಟಾಲ್ಜಿಯಾದಿಂದ ತುಂಬಿಸಿತು.

‘ಅಖಿಲಂ ಮಧುರಂ’ ಎನಿಸಿದ ಭಾವಾಭಿನಯ: “ಮಧುರಾಧಿಪತೇ ಅಖಿಲಂ ಮಧುರಂ”—ಜಗದ್ಗುರು ಶ್ರೀ ವಲ್ಲಭಾಚಾರ್ಯರು ರಚಿಸಿದ ‘ಮಧುರಾಷ್ಟಕಂ’ ಸ್ತೋತ್ರವು ಶ್ರೀಕೃಷ್ಣನ ದಿವ್ಯ ಸೌಂದರ್ಯ, ಲೀಲೆ ಮತ್ತು ಗುಣಮಾಧುರ್ಯವನ್ನು ವರ್ಣಿಸುತ್ತದೆ. ಅದೇ ಧಾಟಿಯಲ್ಲಿ ಹೇಳುವುದಾದರೆ, ಈ ಕಾರ್ಯಕ್ರಮದಲ್ಲಿನ ಸಕಲವೂ ‘ಮಧುರಂ, ಮಧುರಂ’ ಎಂಬಂತಿತ್ತು. ‘ಮಧುರಾಷ್ಟಕಂ’ ಸ್ತೋತ್ರಕ್ಕೆ ನೃತ್ಯಪಟುವೊಬ್ಬರು ಕಥಕ್ ಶೈಲಿಯಲ್ಲಿ ಪ್ರಸ್ತುತಪಡಿಸಿದ ಭಾವಾಭಿನಯ ಕಾರ್ಯಕ್ರಮದ ಅತ್ಯಂತ ಮನೋಜ್ಞ ಕ್ಷಣಗಳಲ್ಲಿ ಒಂದಾಯಿತು. ಭಕ್ತಿ, ಭಾವ ಮತ್ತು ಲಯಗಳ ಸುಂದರ ಸಂಗಮವಾಗಿ ಮೂಡಿಬಂದ ಈ ಪ್ರದರ್ಶನ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.

ಗಂಧರ್ವಲೋಕದ ಅಪ್ಸರೆಯರಂತೆ ವೇದಿಕೆಯನ್ನು ಅಲಂಕರಿಸಿದ ನೃತ್ಯಪಟುಗಳು, ತಮ್ಮ ಸೊಗಸಾದ ಹೆಜ್ಜೆಗಳು ಮತ್ತು ಭಾವಪೂರ್ಣ ಅಭಿನಯದಿಂದ ನೋಡುಗರ ಮನಸ್ಸಿನ ದುಗುಡ ಹಾಗೂ ಕ್ಲೇಶಗಳನ್ನು ಕ್ಷಣಕಾಲ ಮರೆಸಿದರು. ಶಿವ–ಪಾರ್ವತಿ ನೃತ್ಯರೂಪಕ ಸೇರಿದಂತೆ ಪ್ರತಿಯೊಂದು ಪ್ರಸ್ತುತಿಯೂ ಹೊಸತನ ಸೃಷ್ಟಿಸಿತು.

ಸಂಗೀತ, ಸಾಹಿತ್ಯ, ಅಭಿನಯ, ವೇಷಭೂಷಣ ಮತ್ತು ಬೆಳಕಿನ ಸಂಯೋಜನೆಯೊಂದಿಗೆ ಮೂಡಿಬಂದ ‘ಸದಾಬಹಾರ್’ ಕೇವಲ ನೃತ್ಯ ಕಾರ್ಯಕ್ರಮವಾಗಿ ಉಳಿಯದೆ, ಹಳೆಯ ನೆನಪುಗಳನ್ನು ಮರುಜೀವಗೊಳಿಸಿದ ಭಾವಪೂರ್ಣ ಕಲಾಯಾತ್ರೆಯಾಯಿತು. ವಿದುಷಿ ಪೂರ್ಣ ಆಚಾರ್ಯ ಅವರ ಸೃಜನಶೀಲ ಪರಿಕಲ್ಪನೆ ಹಾಗೂ ಕಲಾವಿದೆಯರ ಶ್ರದ್ಧಾಪೂರ್ಣ ಪ್ರದರ್ಶನದಿಂದ ನೃತ್ಯೋತ್ಸವ ತನ್ನ ಹೆಸರಿಗೆ ತಕ್ಕಂತೆ ಸದಾ ಹಸಿರಾಗಿ ಪ್ರೇಕ್ಷಕರ ಮನದಲ್ಲಿ ಉಳಿಯಿತು.
