Friday, March 27, 2026
Homeರಾಜಕೀಯಅಟಲ್ ಜೀ ಅವರು ಜಗತ್ತಿನ ಭೂಪಟದಲ್ಲಿ ಭಾರತದ ಹೆಸರು ಪ್ರಜ್ವಲಿಸುವಂತೆ ಮಾಡಿದ ಮಹಾನ್ ನಾಯಕ: ಬಿ.ವೈ....

ಅಟಲ್ ಜೀ ಅವರು ಜಗತ್ತಿನ ಭೂಪಟದಲ್ಲಿ ಭಾರತದ ಹೆಸರು ಪ್ರಜ್ವಲಿಸುವಂತೆ ಮಾಡಿದ ಮಹಾನ್ ನಾಯಕ: ಬಿ.ವೈ. ವಿಜಯೇಂದ್ರ

ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಜಗತ್ತಿನ ಭೂಪಟದಲ್ಲಿ ಭಾರತದ ಕೀರ್ತಿಯನ್ನು ಬೆಳಗಿಸಿದ ಧೀಮಂತ ನಾಯಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಶ್ಲಾಘಿಸಿದ್ದಾರೆ. ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಅಟಲ್ ಜೀ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ‘ಅಟಲ್ ದೀಪೋತ್ಸವ’ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತಶತ್ರು, ಕವಿಹೃದಯಿ ಮತ್ತು ದೂರದೃಷ್ಟಿಯುಳ್ಳ ರಾಜಕೀಯ ತಜ್ಞರಾಗಿದ್ದರು ಎಂದು ಬಣ್ಣಿಸಿದ ವಿಜಯೇಂದ್ರ ಅವರು, ಇಂದು ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ದೀಪ ಪ್ರಜ್ವಲಿಸುವ ಮೂಲಕ ಅವರನ್ನು ಸ್ಮರಿಸಲಾಗುತ್ತಿದೆ ಎಂದರು. ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಜಾರಿಗೆ ಬಂದ ಸ್ವರ್ಣ ಚತುಷ್ಪಥ ರಸ್ತೆಗಳು, ಸರ್ವ ಶಿಕ್ಷಣ ಅಭಿಯಾನ ಮತ್ತು ಪೋಖ್ರಾನ್ ಅಣು ಪರೀಕ್ಷೆಯಂತಹ ಐತಿಹಾಸಿಕ ನಿರ್ಧಾರಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಠವಾಗಿ ಗುರುತಿಸುವಂತೆ ಮಾಡಿವೆ ಎಂದು ಅವರು ವಿವರಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ನಡೆದ ಪಟ್ಟಣ ಪಂಚಾಯಿತಿಗಳ ಚುನಾವಣಾ ಫಲಿತಾಂಶದ ಕುರಿತು ಮಾತನಾಡಿದ ವಿಜಯೇಂದ್ರ ಅವರು, ಬಿಜೆಪಿಯ ಭರ್ಜರಿ ಗೆಲುವು ಕಾಂಗ್ರೆಸ್ ಪಕ್ಷದ ದುರಾಡಳಿತಕ್ಕೆ ಜನರು ನೀಡಿದ ಪ್ರಬಲ ಸಂದೇಶವಾಗಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಮತ್ತು ಕಿನ್ನಿಗೋಳಿ, ಉತ್ತರ ಕನ್ನಡ ಜಿಲ್ಲೆಯ ಮಂಕಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿ ಹಾಗೂ ರಾಯಚೂರಿನ ತುರ್ವಿಹಾಳ ಉಪಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ವಿಜಯ ಸಾಧಿಸಿರುವುದು ಸಂತೋಷ ತಂದಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷದ ಆಡಳಿತದಿಂದ ಜನರು ಬೇಸತ್ತಿದ್ದು, ಎಲ್ಲಾ ವರ್ಗದ ಜನರು ಆ ಪಕ್ಷದಿಂದ ದೂರವಾಗುತ್ತಿದ್ದಾರೆ ಎಂಬುದು ಈ ಫಲಿತಾಂಶದಿಂದ ಸಾಬೀತಾಗಿದೆ. ಕಾಂಗ್ರೆಸ್ ನಾಯಕರು ಮತ ಚೋರಿ ಎಂದು ಮಾಡುತ್ತಿರುವ ನಾಟಕಗಳನ್ನು ಜನತೆ ಧಿಕ್ಕರಿಸಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಿರಂತರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯ ನಮಗಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ. ರಾಜೀವ್, ಪ್ರೀತಂ ಗೌಡ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹಾಗೂ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!