ಬೆಂಗಳೂರು: ರಾಜ್ಯದಲ್ಲಿ ಗೃಹ ಇಲಾಖೆ ಸತ್ತು ಹೋಗಿದೆ. ಡ್ರಗ್ಸ್ ದಂಧೆಕೋರರ ಮುಂದೆ ಮಂಡಿಯೂರಿರುವ ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ‘ಗಾಂಜಾ ಬೀಡು’ ಮಾಡಿದೆ. ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದಿದ್ದರೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ‘ಗೊತ್ತಿಲ್ಲ ಸಚಿವರೇ ರಾಜೀನಾಮೆ ಕೊಟ್ಟು ನಡೆಯಿರಿ’ ಎಂಬ ವಿಭಿನ್ನ ಪೋಸ್ಟರ್ ಬಿಡುಗಡೆ ಮಾಡಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
“ರಾಜ್ಯದಲ್ಲಿ ಡ್ರಗ್ ಮಾಫಿಯಾ ಅಟ್ಟಹಾಸ ಮೆರೆಯುತ್ತಿದೆ. ಬೆಂಗಳೂರು, ಮೈಸೂರಿನಲ್ಲಿ ಮಾದಕವಸ್ತು ಕಾರ್ಖಾನೆಗಳ ಮೇಲೆ ಮಹಾರಾಷ್ಟ್ರ ಪೊಲೀಸರು ಬಂದು ದಾಳಿ ಮಾಡುತ್ತಿದ್ದಾರೆ ಎಂದರೆ ನಮ್ಮ ಬೇಹುಗಾರಿಕಾ ದಳ ನಿದ್ರಿಸುತ್ತಿದೆಯೇ? ಇದು ಕಾಂಗ್ರೆಸ್ ಸರ್ಕಾರವೇ ಪರೋಕ್ಷವಾಗಿ ದಂಧೆ ನಡೆಸುತ್ತಿರುವ ದ್ಯೋತಕ” ಎಂದು ಆರೋಪಿಸಿದರು.
“ಪರಮೇಶ್ವರ್ ಅವರೇ, ರಾಜ್ಯವನ್ನು ಹಾಳು ಮಾಡುತ್ತಾ ಸಬೂಬು ಹೇಳುವುದನ್ನು ನಿಲ್ಲಿಸಿ. ಇದು ನಿಮ್ಮ ಅಸಹಾಯಕತೆಯೋ ಅಥವಾ ನಿಮ್ಮನ್ನು ಕೆಳಗಿಳಿಸಲು ಕಾಂಗ್ರೆಸ್‌ನವರೇ ಮಾಡುತ್ತಿರುವ ಷಡ್ಯಂತ್ರವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ” ಎಂದು ಛಲವಾದಿ ಸವಾಲು ಹಾಕಿದರು.
ಕೋಗಿಲು ಲೇಔಟ್ ವಿವಾದ: ಬಾಂಗ್ಲಾ-ರೋಹಿಂಗ್ಯಾಗಳ ಓಲೈಕೆ?
ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಗುಡಿಸಲು ತೆರವು ಪ್ರಕರಣದ ಬಗ್ಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು. “ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಥವಾ ಕೆ.ಸಿ. ವೇಣುಗೋಪಾಲ್ ಅವರ ಟ್ವೀಟ್ ಬಂದಾಕ್ಷಣ ರಾಜ್ಯ ಸರ್ಕಾರದ ಬಟ್ಟೆ ಒದ್ದೆಯಾಗುತ್ತದೆ. ನೀವು ಅವರಿಗೆ ಗುಲಾಮರಾಗಬಹುದು, ಆದರೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಬೇಡಿ” ಎಂದು ವ್ಯಂಗ್ಯವಾಡಿದರು.

“ತೆರವುಗೊಂಡ ಜಾಗದಲ್ಲಿ ವಾಸವಿದ್ದವರು ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶದವರು ಎಂಬ ಮಾಹಿತಿ ಇದೆ. ಅವರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನೀಡಲು ಕಾಂಗ್ರೆಸ್ ಮುಂದಾಗಿದೆ. ಇದು ಕೇವಲ ಮತಬ್ಯಾಂಕ್ ಓಲೈಕೆ. ಈ ಕೂಡಲೇ ಈ ಪ್ರಕರಣವನ್ನು ಎನ್‍ಐಎಗೆ (NIA) ಒಪ್ಪಿಸಬೇಕು” ಎಂದು ಒತ್ತಾಯಿಸಿದರು.
ಜಮೀರ್ ಅಹ್ಮದ್ ವಿರುದ್ಧ ವಾಗ್ದಾಳಿ:
ಸಚಿವ ಜಮೀರ್ ಅಹ್ಮದ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ ಛಲವಾದಿ, “ಜಮೀರ್ ಅವರು ಸಂಜೆ ವೇಳೆಗೆ ‘ಸಿಹಿ ಸುದ್ದಿ’ ಸಿಗಲಿದೆ ಎನ್ನುತ್ತಾರೆ. ಅಂದರೆ ಸರ್ಕಾರದ ವ್ಯವಸ್ಥಿತ ಪಿತೂರಿಯಿಲ್ಲದೆ ಇದು ಸಾಧ್ಯವೇ? ಅಕ್ರಮವಾಗಿ ನೆಲೆಸಿರುವವರಿಗೆ ಸವಲತ್ತು ನೀಡುವುದು ದೇಶದ್ರೋಹದ ಕೆಲಸ” ಎಂದು ಗುಡುಗಿದರು.
