ಬೆಂಗಳೂರು: “ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಎಷ್ಟೇ ಅನ್ಯಾಯವಾದರೂ ಅದನ್ನು ಸಮರ್ಥಿಸಿಕೊಳ್ಳುವ ಬಿಜೆಪಿಯವರ ನಡೆಯು ಒಂದು ಮಹಾ ಅಪರಾಧ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇಂದು ರೇಸ್ ಕೋರ್ಸ್ ರಸ್ತೆಯ ಕೆಇಬಿ (KEB) ಇಂಜಿನಿಯರ್ಸ್ ಅಸೋಸಿಯೇಷನ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿಯ ವಿಷಯದಲ್ಲಿ ಬಿಜೆಪಿ ತೋರುತ್ತಿರುವ ಧೋರಣೆಯನ್ನು ತೀವ್ರವಾಗಿ ಟೀಕಿಸಿದರು.
ಉದ್ಯೋಗ ಖಾತ್ರಿ ಯೋಜನೆ (MNREGA): ಚರ್ಚೆಗೆ ನಾವೂ ಸಿದ್ಧ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆ ಕುರಿತಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನೀಡಿರುವ ಚರ್ಚೆಯ ಆಹ್ವಾನಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, “ನಾವು ಚರ್ಚೆಗೆ ಸಿದ್ಧವಿದ್ದೇವೆ ಮತ್ತು ಈ ಕುರಿತು ದೊಡ್ಡ ಆಂದೋಲನವನ್ನೇ ರೂಪಿಸುತ್ತೇವೆ” ಎಂದರು. ಕುಮಾರಸ್ವಾಮಿಯವರ ವೈಯಕ್ತಿಕ ಆರೋಪಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, “ಬಿಜೆಪಿ ಮತ್ತು ಜೆಡಿಎಸ್‌ನವರು ಕೇವಲ ಸುಳ್ಳು ಹೇಳುವುದರಲ್ಲಿ ನಿಪುಣರು” ಎಂದು ವ್ಯಂಗ್ಯವಾಡಿದರು.
ಗಡಿ ಭಾಗದ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ: ಸರ್ಕಾರದ ವಿರೋಧ
ಕೇರಳದ ಗಡಿ ಭಾಗದ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಮೊದಲ ಭಾಷೆಯಾಗಿ ಕಡ್ಡಾಯಗೊಳಿಸಿರುವ ಕುರಿತು ಮಾತನಾಡಿದ ಸಿಎಂ, “ಈ ಬಗ್ಗೆ ಈಗಾಗಲೇ ಕೇರಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಕನ್ನಡಿಗರ ಹಿತರಕ್ಷಣೆಗಾಗಿ ಹೋರಾಟ ನಡೆಸಲು ನಾವು ಬದ್ಧರಿದ್ದೇವೆ” ಎಂದು ತಿಳಿಸಿದರು.
ದ್ವೇಷ ಭಾಷಣ ಮಸೂದೆ: ರಾಜ್ಯಪಾಲರ ಭೇಟಿ
ದ್ವೇಷ ಭಾಷಣ ತಡೆಗೆ ಸಂಬಂಧಿಸಿದ ಮಸೂದೆ ರಾಜ್ಯಪಾಲರ ಬಳಿ ಬಾಕಿ ಇರುವ ಕುರಿತು ಪ್ರತಿಕ್ರಿಯಿಸಿ, ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿಯಾಗಿ ಮಸೂದೆಯ ಕುರಿತು ಅಗತ್ಯ ವಿವರಣೆ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಬಾಂಗ್ಲಾದೇಶಿ ವಲಸಿಗರು ಹೆಚ್ಚಾಗಿದ್ದಾರೆ ಎಂಬ ಆರೋಪದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಅಂತಹ ವಲಸಿಗರು ಇದ್ದರೆ ಅವರ ಹೆಸರುಗಳ ಪಟ್ಟಿಯನ್ನು ನೀಡಲಿ, ತನಿಖೆ ನಡೆಸೋಣ” ಎಂದು ಸವಾಲು ಹಾಕಿದರು.
