ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಭಾರಿ ರಾಜಕೀಯ ಸಂಘರ್ಷ ಏರ್ಪಟ್ಟಿದೆ. ಜಾರಿ ನಿರ್ದೇಶನಾಲಯವು (ED) ಕೋಲ್ಕತ್ತಾದ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (I-PAC) ಕಚೇರಿಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರು ಅಲ್ಲಿಗೆ ಭೇಟಿ ನೀಡಿ ಕಡತಗಳನ್ನು ಕೊಂಡೊಯ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಈಗಾಗಲೇ ಎರಡು ಎಫ್‌ಐಆರ್‌ಗಳು ದಾಖಲಾಗಿವೆ.
ಮಮತಾ ಬ್ಯಾನರ್ಜಿ ಅವರು ತನಿಖಾ ಪ್ರಕ್ರಿಯೆಗೆ ಅಡ್ಡಿ ಪಡಿಸಿದ್ದಾರೆ ಮತ್ತು ಪ್ರಮುಖ ಸಾಕ್ಷ್ಯಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ಇಡಿ ಅಧಿಕಾರಿಗಳು ಕೋಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಿಎಂ ತಮ್ಮ ಸಾಂವಿಧಾನಿಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಐ-ಪಿಎಸಿ ಮುಖ್ಯಸ್ಥರ ನಿವಾಸಕ್ಕೆ ನುಗ್ಗಿದ್ದಾರೆ ಎಂದು ಇಡಿ ದೂರಿದ್ದು, ಅವರ ವಿರುದ್ಧ ಕಾನೂನು ಹೋರಾಟವನ್ನು ತೀವ್ರಗೊಳಿಸಿದೆ.
ಈ ಇಡಿ ದಾಳಿಯನ್ನು ಖಂಡಿಸಿ ತೃಣಮೂಲ ಕಾಂಗ್ರೆಸ್ (TMC) ಸಂಸದರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಸಂಸದರಾದ ಡೆರೆಕ್ ಒಬ್ರಿಯಾನ್, ಮಹುವಾ ಮೊಯಿತ್ರಾ, ಶತಾಬ್ದಿ ರಾಯ್ ಮತ್ತು ಕೀರ್ತಿ ಆಜಾದ್ ಸೇರಿದಂತೆ ಹಲವು ನಾಯಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾ ನಿರತ ಸಂಸದರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ವೇಳೆ ಮಾತನಾಡಿದ ಮಹುವಾ ಮೊಯಿತ್ರಾ ಅವರು, ದೆಹಲಿ ಪೊಲೀಸರು ಚುನಾಯಿತ ಪ್ರತಿನಿಧಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ದೇಶ ಗಮನಿಸುತ್ತಿದೆ ಎಂದು ಕಿಡಿಕಾರಿದರು.
ಬಿಜೆಪಿಯು ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಚುನಾವಣೆಗಳನ್ನು ಗೆಲ್ಲಲು ಇಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಟಿಎಂಸಿ ನಾಯಕ ಕೀರ್ತಿ ಆಜಾದ್ ಟೀಕಿಸಿದರು. ಜಾರಿ ನಿರ್ದೇಶನಾಲಯದ ಈ ಕ್ರಮಗಳು ಕೇವಲ ಸೇಡಿನ ರಾಜಕೀಯ ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಕ್ರಮಗಳ ವಿರುದ್ಧ ಪ್ರತಿಭಟಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಬೀದಿಗಿಳಿಯಲಿದ್ದಾರೆ. ಜಾದವ್‌ಪುರ ಬಸ್ ನಿಲ್ದಾಣದಿಂದ ಹಜ್ರಾ ಕ್ರಾಸಿಂಗ್‌ವರೆಗೆ ಸುಮಾರು 5 ಕಿಲೋಮೀಟರ್ ಉದ್ದದ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದ್ದಾರೆ.
