Wednesday, March 25, 2026
Homeರಾಜಕೀಯಸಿದ್ದರಾಮಯ್ಯ ಅವರಿಗೆ ಅರಸು ಅವರ ಹೆಸರು ಹೇಳುವ ನೈತಿಕತೆ ಇಲ್ಲ; ಜನವರಿ 15 ರಿಂದ ಬಿಜೆಪಿ...

ಸಿದ್ದರಾಮಯ್ಯ ಅವರಿಗೆ ಅರಸು ಅವರ ಹೆಸರು ಹೇಳುವ ನೈತಿಕತೆ ಇಲ್ಲ; ಜನವರಿ 15 ರಿಂದ ಬಿಜೆಪಿ ಜಾಗೃತಿ ಅಭಿಯಾನ: ಬಿ.ವೈ. ವಿಜಯೇಂದ್ರ

ಬೆಂಗಳೂರು: ಕೇಂದ್ರದ ನೂತನ ‘ವಿಬಿಜಿ ರಾಮ್ ಜಿ’ (VBG Ramji) ಕಾಯ್ದೆಯ ಕುರಿತು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಈ ಯೋಜನೆಯ ಬಗ್ಗೆ ಜನವರಿ 15 ರಿಂದ ಫೆಬ್ರವರಿ 28 ರವರೆಗೆ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಘೋಷಿಸಿದರು.

ಕಾಂಗ್ರೆಸ್‌ನಿಂದ ಮನ್ರೇಗಾ ಅಪಪ್ರಚಾರ

ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮನ್ರೇಗಾ (MGNREGA) ಯೋಜನೆಯಲ್ಲಿ ಭ್ರಷ್ಟಾಚಾರ ಮತ್ತು ದುರ್ಬಳಕೆ ಇತ್ತು. ಅದನ್ನು ಸುಧಾರಿಸಿ ಮೂಲಸೌಕರ್ಯ ವೃದ್ಧಿಗೆ ಸಹಕಾರಿಯಾಗುವಂತೆ ಎನ್‌ಡಿಎ ಸರ್ಕಾರ ವಿಬಿಜಿ ರಾಮ್ ಜಿ ಕಾಯ್ದೆಯನ್ನು ತಂದಿದೆ. ಆದರೆ ಕಾಂಗ್ರೆಸ್ ಈ ಯೋಜನೆಯಲ್ಲೂ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಅಂಬೇಡ್ಕರ್ ಅಥವಾ ಗಾಂಧೀಜಿಯವರ ಹೆಸರಿಗೆ ಬಿಜೆಪಿ ಎಂದಿಗೂ ಅಪಮಾನ ಮಾಡಿಲ್ಲ, ಅಂತಹ ಜಾಯಮಾನ ಕೇವಲ ಕಾಂಗ್ರೆಸ್‌ನದ್ದು ಎಂದು ಕಿಡಿಕಾರಿದರು.

ಅರಸು ದಾಖಲೆ ಮುರಿದಿದ್ದೇನೆ ಎನ್ನುವುದು ಭ್ರಮೆ 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ಸುದೀರ್ಘ ಆಡಳಿತದ ದಾಖಲೆಯನ್ನು ಮುರಿದಿದ್ದಾರೆ ಎಂಬ ಜಾಹೀರಾತುಗಳ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, “ಇದು ಕೇವಲ ಸಿದ್ದರಾಮಯ್ಯ ಅವರ ಭ್ರಮೆ” ಎಂದರು.

  • ದೇವರಾಜ ಅರಸು ಅವರು ಭೂಸುಧಾರಣೆ, ಮಲ ಹೊರುವ ಪದ್ಧತಿ ನಿವಾರಣೆ ಮತ್ತು ವೃದ್ಧಾಪ್ಯ ವೇತನದಂತಹ ಕ್ರಾಂತಿಕಾರಿ ಬದಲಾವಣೆ ತಂದಿದ್ದರು. ಅಂತಹ ನಾಯಕನನ್ನು ಕಾಂಗ್ರೆಸ್ ಪಕ್ಷವೇ ಉಚ್ಛಾಟನೆ ಮಾಡಿ ಅಪಮಾನಿಸಿತ್ತು ಎಂದು ಅವರು ಸ್ಮರಿಸಿದರು.

ಸಿದ್ದರಾಮಯ್ಯ ಸಾಧನೆ ಏನು?

 ಸಿದ್ದರಾಮಯ್ಯ ಅವರ ಆಡಳಿತವನ್ನು ಪ್ರಶ್ನಿಸಿದ ವಿಜಯೇಂದ್ರ ಈ ಕೆಳಗಿನ ಆರೋಪಗಳನ್ನು ಮಾಡಿದರು:

  • ಅವಕಾಶವಾದಿ ರಾಜಕಾರಣ: ಸಿದ್ದರಾಮಯ್ಯ ಅವರು ಅದೃಷ್ಟದಿಂದ ಸಿಎಂ ಆದ ಅವಕಾಶವಾದಿ ನಾಯಕ. 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದನ್ನು ಅವರು ಮರೆಯಬಾರದು.
  • ಅಹಿಂದಕ್ಕೆ ದ್ರೋಹ: ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಕಾಂತರಾಜು ವರದಿ ಜಾರಿ ಮಾಡದೆ ಕಸದ ಬುಟ್ಟಿಗೆ ಹಾಕುವ ಮೂಲಕ ಕನ್ನಡಿಗರಿಗೆ ಮೋಸ ಮಾಡಿದ್ದಾರೆ.
  • ಮುಡಾ ಹಗರಣ: ಬಡವರಿಗೆ ಮೀಸಲಿಟ್ಟ ಸೈಟುಗಳನ್ನು ತಮ್ಮ ಕುಟುಂಬಕ್ಕೆ ಪಡೆದು, ನಂತರ ಯಾರಿಗೂ ತಿಳಿಯದಂತೆ ವಾಪಸ್ ನೀಡಿದ್ದು ಬಡವರಿಗೆ ಮಾಡಿದ ಮೋಸವಲ್ಲವೇ?.
  • ಧರ್ಮಸ್ಥಳದ ವಿರುದ್ಧ ಸಂಚು: ಧರ್ಮಸ್ಥಳದ ಭಕ್ತರ ಭಾವನೆಗೆ ಧಕ್ಕೆ ತರಲು ಎಸ್‌ಐಟಿ ರಚನೆ ಮಾಡಿ ಷಡ್ಯಂತ್ರ ನಡೆಸಿದ್ದಾರೆ.
  • ಆರ್ ಸಿ ಬಿ ದುರಂತ: ಆರ್ ಸಿ ಬಿ ಕಾಲ್ತುಳಿತದಲ್ಲಿ 11 ಜನರ ಸಾವಿಗೆ ಕಾರಣರಾದರು, ಇದೇನಾ ನಿಮ್ಮ ಸಾಧನೆ ಎಂದು ಪ್ರಶ್ನಿಸಿದರು.

ಕೋಗಿಲು ಲೇಔಟ್‌ನಲ್ಲಿ ಬಡವರಿಗೆ ಮನೆ ಕೊಡದ ಸಿದ್ದರಾಮಯ್ಯ ಸರ್ಕಾರ, ಈಗ ಹೈಕಮಾಂಡ್ ಮತ್ತು ಕೇರಳ ಸಿಎಂ ಒತ್ತಡಕ್ಕೆ ಮಣಿದು ನಿರ್ಧಾರ ಕೈಗೊಳ್ಳುತ್ತಿದೆ. ಹೀಗಾಗಿ ಅರಸು ಅವರ ಹೆಸರು ಹೇಳಲು ಸಿದ್ದರಾಮಯ್ಯ ಅವರಿಗೆ ಯಾವುದೇ ಯೋಗ್ಯತೆ ಇಲ್ಲ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!