ಬೆಳಗಾವಿ: ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ತಲುಪಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಜೆಪಿ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಕಿಡಿಕಾರಿದ್ದಾರೆ. ಬೆಳಗಾವಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಲ್ಲಿನ ಹಣಕಾಸಿನ ವ್ಯತ್ಯಯದ ಕುರಿತು ಗಂಭೀರ ಆರೋಪಗಳನ್ನು ಮಾಡಿದರು.
5 ಸಾವಿರ ಕೋಟಿ ‘ಗೋವಿಂದ’ ಆಗುತ್ತಿತ್ತು!
ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಕುರಿತು ಸಚಿವರು ಸದನದಲ್ಲಿ ತಪ್ಪು ಮಾಹಿತಿ ನೀಡಿದ್ದಕ್ಕೆ ಈಗಾಗಲೇ ಕ್ಷಮೆ ಕೇಳಿದ್ದಾರೆ. ಒಂದು ವೇಳೆ ಬಿಜೆಪಿ ಈ ಬಗ್ಗೆ ಆಧಾರಸಹಿತ ಪ್ರಶ್ನೆ ಮಾಡದೇ ಹೋಗಿದ್ದರೆ, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಸುಮಾರು 5 ಸಾವಿರ ಕೋಟಿ ರೂಪಾಯಿ ಹಣ ಬಡವರಿಗೆ ತಲುಪುವ ಮೊದಲೇ ‘ಗೋವಿಂದ’ ಆಗುತ್ತಿತ್ತು. ಬಡವರ ಹಕ್ಕಿನ ಹಣವನ್ನು ನುಂಗುವ ಪ್ರಯತ್ನ ನಡೆದಿದೆ ಎಂದು ಅವರು ಆಕ್ಷೇಪಿಸಿದರು. ಇದು ಸಣ್ಣ ಮೊತ್ತವಲ್ಲದ ಕಾರಣ ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ಸಾರಿಗೆ ನಿಗಮಗಳ ದುಸ್ಥಿತಿಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ
ಇದೇ ವೇಳೆ ‘ಶಕ್ತಿ’ ಯೋಜನೆಯ ಬಗ್ಗೆಯೂ ಮಾತನಾಡಿದ ಸಿ.ಟಿ. ರವಿ, ಸರ್ಕಾರ ಸಾರಿಗೆ ನಿಗಮಗಳಿಗೆ ಸಕಾಲಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಇದರಿಂದಾಗಿ ಬಸ್‌ಗಳಿಗೆ ಹೊಸ ಟಯರ್ ಹಾಕಲು ಅಥವಾ ಬಿಡಿಭಾಗಗಳನ್ನು ಖರೀದಿಸಲು ಹಣವಿಲ್ಲದಂತಾಗಿದೆ. ಸಾರಿಗೆ ನೌಕರರಿಗೆ ಸಂಬಳ ಕೊಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಹಣ ನೀಡದಿದ್ದರೆ ಬಸ್‌ಗಳು ರಸ್ತೆಯಲ್ಲಿ ಕೆಟ್ಟು ನಿಲ್ಲದೆ ಇನ್ನೇನಾಗಲು ಸಾಧ್ಯ ಎಂದು ಪ್ರಶ್ನಿಸಿದರು.
ಬಜೆಟ್ ಮರುಹೊಂದಾಣಿಕೆ ಅಸಾಧ್ಯ
ಹಿಂದಿನ ಬಜೆಟ್ ಅವಧಿ ಮುಗಿದಿದ್ದು, ಈಗ 2025-26ರ ಬಜೆಟ್ ಜಾರಿಯಲ್ಲಿದೆ. ಹಳೆಯ ಬಾಕಿಗಳನ್ನು ಈಗ ಮರುಹೊಂದಾಣಿಕೆ ಮಾಡುವುದು ಅಸಾಧ್ಯದ ಮಾತು. ಹಣಕಾಸಿನ ನಿರ್ವಹಣೆಯಲ್ಲಿ ಸರ್ಕಾರ ಎಡವುತ್ತಿರುವುದು ಸ್ಪಷ್ಟವಾಗಿದೆ ಎಂದು ಟೀಕಿಸಿದರು.
