Tuesday, February 10, 2026
Homeವಿಶೇಷಸತತ 4 ದಿನಗಳಿಂದ ಇಂಡಿಗೋ ಅನುಭವಿಸುತ್ತಿರುವ ಭಾರಿ ಬಿಕ್ಕಟ್ಟಿಗೆ ಕಾರಣವೇನು? ಇಂಡಿಗೋ ಎಡವಿದ್ದೇಲ್ಲಿ?

ಸತತ 4 ದಿನಗಳಿಂದ ಇಂಡಿಗೋ ಅನುಭವಿಸುತ್ತಿರುವ ಭಾರಿ ಬಿಕ್ಕಟ್ಟಿಗೆ ಕಾರಣವೇನು? ಇಂಡಿಗೋ ಎಡವಿದ್ದೇಲ್ಲಿ?

ಭಾರತೀಯ ವಿಮಾನಯಾನ ಕ್ಷೇತ್ರದ ಅತಿ ದೊಡ್ಡ ಹಾಗೂ ನಂಬಿಕೆಯುಳ್ಳ ಏರ್‌ಲೈನ್ಸ್‌ ಆಗಿರುವ ಇಂಡಿಗೋ (IndiGo) , ಸದ್ಯ ತನ್ನ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಕಾರ್ಯಾಚರಣೆಯ ಬಿಕ್ಕಟ್ಟಿನಲ್ಲಿದೆ. ಕಳೆದ ನಾಲ್ಕು ದಿನಗಳಲ್ಲಿ ವಿಮಾನಯಾನ ಸಂಸ್ಥೆಯ ‘ಸಮಯದ ನಿಖರತೆ’ (On-Time Performance – OTP) ಒಂದೇ ಅಂಕಿಗೆ ಕುಸಿದಿದ್ದು, ದೇಶಾದ್ಯಂತ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬೃಹತ್ ಗಾತ್ರದ ಇಂಡಿಗೋ ವಿಮಾನಯಾನ ಸಂಸ್ಥೆ ಏಕಾಏಕಿ ಈ ಸಂಕಷ್ಟಕ್ಕೆ ಸಿಲುಕಲು ನಿರ್ದಿಷ್ಟ ಕಾರಣಗಳೇನು? ಇದು ಕೇವಲ ಸಿಬ್ಬಂದಿ ಕೊರತೆಯೇ? ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣ ಇದೆಯೇ ಎಂಬ ವಿವರ ಇಲ್ಲಿದೆ.

434 ವಿಮಾನಗಳ ಬೃಹತ್ ಶ್ರೇಣಿ ಹೊಂದಿರುವ ಮತ್ತು ಪ್ರತಿದಿನ 2,200ಕ್ಕೂ ಹೆಚ್ಚು ವಿಮಾನಯಾನಗಳನ್ನು ನಿರ್ವಹಿಸುವ ಇಂಡಿಗೋ, ಭಾರತೀಯ ವಾಯುಯಾನ ಕ್ಷೇತ್ರದ ಬೆನ್ನೆಲುಬಾಗಿದೆ. ಆರ್ಥಿಕ ವರ್ಷ 2025ರ ಆರ್ಥಿಕ ವರ್ಷದಲ್ಲಿ ಶೇ. 73.8 ರಷ್ಟು OTP ಸಾಧಿಸಿದ್ದ ಈ ಏರ್‌ಲೈನ್, ಡಿಸೆಂಬರ್ ತಿಂಗಳ ಆರಂಭದಲ್ಲಿ ಭಾರೀ ಕುಸಿತ ಕಂಡಿದೆ. ಡಿಸೆಂಬರ್ 1 ರಂದು ಶೇ. 50 ಕ್ಕೆ ಇಳಿದ OTP, ಡಿಸೆಂಬರ್ 4 ರ ವೇಳೆಗೆ ಐತಿಹಾಸಿಕವಾಗಿ ಶೇ. 8.5 ರಷ್ಟಕ್ಕೆ ಕುಸಿದಿದೆ. ಇದರ ಪರಿಣಾಮವಾಗಿ ನೂರಾರು ವಿಮಾನಗಳು ರದ್ದಾಗಿದ್ದು, ವಿಳಂಬಕ್ಕೀಡಾಗಿವೆ.

ಹೊಸ FDTL ನಿಯಮಗಳೇ ಮುಖ್ಯ ಕಾರಣ

ವಾಯುಯಾನ ಕ್ಷೇತ್ರದಲ್ಲಿ ಈ ಬಿಕ್ಕಟ್ಟು ಉದ್ಭವಿಸಲು ಮುಖ್ಯ ಕಾರಣವೆಂದರೆ, ಡಿಜಿಸಿಎ (DGCA) ಜಾರಿಗೆ ತಂದಿರುವ ಹೊಸ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಶನ್ (FDTL) ನಿಯಮಗಳ ಎರಡನೇ ಹಂತ. ಪೈಲಟ್‌ಗಳಿಗೆ ಅನುಕೂಲ ಮಾಡಲು ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿಯಮಗಳನ್ನು ಬದಲಾಯಿಸಲಾಗಿದೆ. ಎರಡನೇ ಹಂತದ ಅಡಿಯಲ್ಲಿ, ‘ರೆಡ್ ಐ’ ವಿಮಾನಗಳು ಎಂದು ಕರೆಯಲ್ಪಡುವ ಅಂದರೆ, ತಡರಾತ್ರಿ ಹಾರಾಟ ಮಾಡುವ ವಿಮಾನಗಳಿಗೆ ನಿರ್ಬಂಧಗಳನ್ನು ವಿಧಿಸಲಾಗಿದೆ.

ಹೊಸ ನಿಯಮದ ಪ್ರಕಾರ, ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 6 ಗಂಟೆಯ ನಡುವೆ ಪೈಲಟ್‌ಗೆ ನಿಗದಿಪಡಿಸಿದ್ದ ‘ರಾತ್ರಿ ಲ್ಯಾಂಡಿಂಗ್’ ಮಿತಿಯನ್ನು ಆರರಿಂದ ಕೇವಲ ಎರಡಕ್ಕೆ ಇಳಿಸಲಾಗಿದೆ. ಅಂದರೆ, ಹಿಂದೆ ಒಂದು ರಾತ್ರಿ ಪಾಳಿಯಲ್ಲಿ ಆರು ಲ್ಯಾಂಡಿಂಗ್ ಮಾಡಬಹುದಾಗಿದ್ದ ಪೈಲಟ್ ಈಗ ಕೇವಲ ಎರಡಕ್ಕೆ ಸೀಮಿತಗೊಳ್ಳಲಿದ್ದಾರೆ. ಈ ನಿಯಮ ಪಾಲಿಸಲು ಏರ್‌ಲೈನ್‌ಗೆ ತಕ್ಷಣವೇ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯ ಅಗತ್ಯವಿತ್ತು, ಸಮಯ ತೆಗೆದುಕೊಂಡು ಈ ನಿಯಮಗಳನ್ನು ಜಾರಿ ಮಾಡಬೇಕಿತ್ತು. ಆದರೆ, ಮುಂದಾಲೋಚನೆಯಿಲ್ಲದೆ ನಿಯಗಳನ್ನು ತಕ್ಷಣವೇ ಜಾರಿ ಮಾಡಿರುವುದರಿಂದ ಇಂತಹ ಸಂಕಷ್ಟ ಎದುರಾಗಿದೆ.

ನಿರ್ವಹಣೆಯ ವೈಫಲ್ಯವೆಂದ ಪೈಲಟ್ ಸಂಘಟನೆ

ಈ ಸನ್ನಿವೇಶಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಏರ್‌ಲೈನ್ ಹೇಳಿಕೊಂಡಿದೆ. ಆದರೆ, ಪೈಲಟ್ ಸಂಘಟನೆಗಳು ಇದನ್ನು ದುರ್ಬಲ ನಿರ್ವಹಣೆ ಎಂದು ದೂರಿವೆ. ಫೆಡರೇಷನ್ ಆಫ್ ಇಂಡಿಯನ್ ಪೈಲಟ್ಸ್ (FIP) ಮತ್ತು ಏರ್‌ಲೈನ್ ಪೈಲಟ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (ALPA), ಈ ಹೊಸ ನಿಯಮಗಳಿಗೆ ಸಿದ್ಧರಾಗಲು ಇಂಡಿಗೋಗೆ ಎರಡು ವರ್ಷಗಳ ಕಾಲಾವಕಾಶವಿತ್ತು. ಆದರೆ, ಆ ಅವಧಿಯಲ್ಲಿ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಬದಲು, ನೇಮಕಾತಿಯನ್ನು ತಡೆಹಿಡಿಯಲಾಗಿತ್ತು. ಇದೇ ಈಗಿನ ಸಮಸ್ಯೆಯ ಮುಖ್ಯ ಮೂಲ ಎಂದು ಆರೋಪಿಸಿವೆ.

ಇಂಡಿಗೋ ಸಂಕಷ್ಟಕ್ಕೆ ಕಾರಣಗಳೇನು?

ಟಾಟಾ ಸಮೂಹದ ಏರ್ ಇಂಡಿಯಾ ಅಥವಾ ಇತರ ಏರ್‌ಲೈನ್‌ಗಳಿಗೆ ಹೋಲಿಸಿದರೆ ಇಂಡಿಗೋ ಮೇಲೆ ಈ ಬಿಕ್ಕಟ್ಟು ತೀವ್ರವಾಗಿ ಪರಿಣಾಮ ಬೀರಲು ಮೂರು ಕಾರಣಗಳಿವೆ.

1.ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಕೆಲಸ (High Usage, Low Cost Model)

ಇಂಡಿಗೋ ಒಂದು ಕಡಿಮೆ ದರದ ವಿಮಾನಯಾನ ಸಂಸ್ಥೆ (Low-Cost Carrier). ಇವರ ಮುಖ್ಯ ತಂತ್ರ ಏನೆಂದರೆ, ಕಡಿಮೆ ಟಿಕೆಟ್ ದರದಲ್ಲಿ ಹೆಚ್ಚು ಲಾಭ ಗಳಿಸುವುದು. ತಮ್ಮ ವಿಮಾನಗಳನ್ನು ಮತ್ತು ಪೈಲಟ್/ಸಿಬ್ಬಂದಿಯನ್ನು ದಿನದಲ್ಲಿ ಗರಿಷ್ಠ ಸಮಯ ಬಳಸುತ್ತಾರೆ. ಆದರೆ, ಹೊಸ ನಿಯಮದ ಪ್ರಕಾರ ಬಂದು ಸಿಬ್ಬಂದಿ ಎಷ್ಟು ಗಂಟೆ ಕೆಲಸ ಮಾಡಬೇಕು, ಎಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಮಿತಿ ಹಾಕಿದಾಗ (FDTL), ಇಂಡಿಗೋಗೆ ತನ್ನ ವಿಮಾನಗಳನ್ನು ಮತ್ತು ಸಿಬ್ಬಂದಿಯನ್ನು ಹಿಂದೆ ಬಳಸುತ್ತಿದ್ದಷ್ಟು ಬಳಸಲು ಸಾಧ್ಯವಾಗಲಿಲ್ಲ. ಹಾಗಾಗಿ, ವಿಮಾನಗಳು ನಿಂತಲ್ಲೇ ನಿಲ್ಲಬೇಕಾಗಿದೆ ಮತ್ತು ಕಡಿಮೆ ವಿಮಾನಗಳೇ ಹಾರಾಟ ಮಾಡುತ್ತಿರುವುದರಿಂದ ಆದಾಯಕ್ಕೆ ಹೊಡೆತ ಬಿದ್ದಿದೆ

2. ರಾತ್ರಿಯ ಹಾರಾಟವೇ ದೊಡ್ಡ ಸಮಸ್ಯೆ (Night Flights Dependence)

ಇಂಡಿಗೋ ಬೇರೆ ಕಂಪನಿಗಳಿಗಿಂತ ಹೆಚ್ಚು ತಡರಾತ್ರಿ ವಿಮಾನಗಳನ್ನು (Night Flights / Red-Eye Flights) ಹಾರಾಟಕ್ಕೆ ಬಳಸುತ್ತದೆ. ಆದರೆ, ಹೊಸ ನಿಯಮದ ಪ್ರಕಾರ, ತಡರಾತ್ರಿ 12 ರಿಂದ ಬೆಳಿಗ್ಗೆ 6 ರ ನಡುವೆ ಪೈಲಟ್‌ಗಳ ಲ್ಯಾಂಡಿಂಗ್ ಸಂಖ್ಯೆಯನ್ನು ಆರರಿಂದ ಎರಡಕ್ಕೆ ಇಳಿಸಲಾಗಿದೆ. ಇದು ಇಂಡಿಗೋಗೆ ತೀವ್ರ ಹೊಡೆತ ನೀಡಿದೆ.

3. ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ (Lean Staffing)

ಇಂಡಿಗೋ ಯಾವಾಗಲೂ ಸಾಧ್ಯವಾದಷ್ಟು ಕಡಿಮೆ ಸಿಬ್ಬಂದಿಯನ್ನು ಬಳಸಿಕೊಂಡು ಕೆಲಸ ಮಾಡುವ ಮಾದರಿಯನ್ನು ಅನುಸರಿಸುತ್ತದೆ. ನಿಯಮಗಳು ಬದಲಾಗುತ್ತವೆ ಎಂದು ಗೊತ್ತಿದ್ದರೂ, ಇಂಡಿಗೋ ಸಮಯಕ್ಕೆ ಸರಿಯಾಗಿ ಹೊಸ ಪೈಲಟ್‌ಗಳು ಅಥವಾ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿಲ್ಲ. ಕಡಿಮೆ ಸಿಬ್ಬಂದಿ ಇರುವಾಗ, ಒಂದು ಸಣ್ಣ ನಿಯಮ ಬದಲಾವಣೆಯಾದರೂ ಇಡೀ ವ್ಯವಸ್ಥೆ ಕುಸಿಯುತ್ತದೆ. ಇಂಡಿಗೋಗೆ ಶೇ. 10 ರಷ್ಟು ವಿಮಾನಗಳು ರದ್ದಾಗುವುದೆಂದರೆ ಅದು ಬರೋಬ್ಬರಿ 230 ವಿಮಾನಗಳು ರದ್ದಾದಂತೆ ಆಗುತ್ತದೆ.

ಈ ಮಧ್ಯೆ, ಇಂಡಿಗೋ ಸಂಸ್ಥೆಯು ಪ್ರಯಾಣಿಕರ ತೊಂದರೆಯನ್ನು ಕಡಿಮೆ ಮಾಡಲು ಮತ್ತು ಸುರಕ್ಷತೆಯ ಅಂತರವನ್ನು ಕಾಯ್ದುಕೊಳ್ಳಲು ಅನುಕೂಲವಾಗುವಂತೆ, ಏರ್‌ಬಸ್ A320 ಕಾರ್ಯಾಚರಣೆಗಳಿಗೆ ಸಂಬಂಧಿಸಿದ ರಾತ್ರಿ ಕರ್ತವ್ಯ ನಿಯಮಗಳಿಂದ ಫೆಬ್ರವರಿ 10, 2026 ರವರೆಗೆ ವಿನಾಯಿತಿ ನೀಡುವಂತೆ ಡಿಜಿಸಿಎಗೆ ಮನವಿ ಮಾಡಿದೆ.

ಒಟ್ಟಿನಲ್ಲಿ, ಇಂಡಿಗೋ ತನ್ನ ದೊಡ್ಡ ಜಾಲ ಮತ್ತು ಕನಿಷ್ಠ ಸಿಬ್ಬಂದಿಯೊಂದಿಗೆ ಕೆಲಸ ಮಾಡುವ ಶೈಲಿಯಿಂದಾಗಿ, ಹೊಸ ನಿಯಮಗಳು ತೀವ್ರ ಬಿಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!