ಕೋಲಾರ; ನಗರದ ಹೊರವಲಯದಲ್ಲಿರುವ ದಕ್ಷಿಣ ಕಾಶಿ ಎಂದು ಖ್ಯಾತಿ ಪಡೆದಿರುವ ಅಂತರಗಂಗೆಯ ಕಾಶಿ ವಿಶ್ವೇಶ್ವರಸ್ವಾಮಿ ಸನ್ನಿಧಿಯಲ್ಲಿ ಅದ್ಧೂರಿ ಶಿವ ಲಕ್ಷ ದೀಪೋತ್ಸವ ಮತ್ತು ತೆಪ್ಪೋತ್ಸವ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ನಡೆಯುತ್ತಿವೆ. ಶಿವ ಲಕ್ಷ ದೀಪೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ ಭಕ್ತಿ ಸಾಗರದಲ್ಲಿ ಮಿಂದೆದ್ದರು.
ಕಳೆದ ಇಪ್ಪತ್ತು ವರ್ಷಗಳಿಂದಲೂ ಅಂತರಗಂಗೆಯಲ್ಲಿ ಈ ಶಿವ ಲಕ್ಷ ದೀಪೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಕಾರ್ಯಕ್ರಮದ ನಿಮಿತ್ತ ಅಂತರಗಂಗೆ ಬೆಟ್ಟದ ದಾರಿಯುದ್ದಕ್ಕೂ ಹಚ್ಚಿದ್ದ ಮಣ್ಣಿನ ಹಣತೆಗಳ ಸಾಲುಗಳು ಶ್ರದ್ಧಾ ಭಕ್ತಿಯ ಪ್ರತೀಕವಾಗಿ ಕಂಗೊಳಿಸಿದವು.
ಮುಂಜಾನೆ ಬೆಟ್ಟದ ತಪ್ಪಲಿನಲ್ಲಿರುವ ಜಲಕಂಠೇಶ್ವರನಿಗೆ ಪಂಚಾಮೃತ ಅಭಿಷೇಕದೊಂದಿಗೆ ಪೂಜಾ ವಿಧಿಗಳು ಆರಂಭಗೊಂಡವು. ನಂತರ ಬೆಟ್ಟದಲ್ಲಿರುವ ಕಾಶಿವಿಶ್ವೇಶ್ವರನಿಗೆ ಅಭಿಷೇಕ ಹಾಗೂ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಕೊರೆಯುವ ಚಳಿಯ ನಡುವೆಯೂ ಸಾವಿರಾರು ಭಕ್ತರು ಮಣ್ಣಿನ ದೀಪಗಳಿಗೆ ಎಣ್ಣೆ ಹಾಕಿ ದೀಪ ಬೆಳಗಿಸಿದರು. ಶಿವ ಲಕ್ಷ ದೀಪೋತ್ಸವಕ್ಕಾಗಿ ಗರ್ಭಗುಡಿಯಲ್ಲಿರುವ ಶಿವನಿಗೆ ವಿಶೇಷವಾಗಿ ಹೂವಿನ ಅಲಂಕಾರವನ್ನು ಮಾಡಲಾಗಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ಕಾಶಿ ವಿಶ್ವೇಶ್ವರಸ್ವಾಮಿಗೆ ಅತ್ಯಂತ ವಿಶಿಷ್ಟ ರೀತಿಯಲ್ಲಿ ಹೂವಿನ ಅಲಂಕಾರ ಮತ್ತು ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಭಕ್ತಾದಿಗಳ ಕಣ್ಮನ ಸೆಳೆಯಿತು.
ಕಲ್ಯಾಣೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
ತೆಪ್ಪೋತ್ಸವದ ಅಂಗವಾಗಿ, ವಿಶಾಲಾಕ್ಷಿ ಸಮೇತ ಕಾಶಿ ವಿಶ್ವೇಶ್ವರ ಸ್ವಾಮಿಯ ಕಲ್ಯಾಣೋತ್ಸವವನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಕಲ್ಲು ಬಸವನ ಬಾಯಿಂದ ಸದಾ ನೀರು ಜಿನುಗುವ ಅಂತರಗಂಗೆ ದೇವಾಲಯದ ಕಲ್ಯಾಣಿಯಲ್ಲಿ ವಾದ್ಯಗೋಷ್ಠಿಯೊಂದಿಗೆ ನಡೆದ ತೆಪ್ಪೋತ್ಸವವನ್ನು ನೆರೆದಿದ್ದ ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು. ನಾದಸ್ವರ ಮತ್ತು ಸ್ಯಾಕ್ಸೊಫೋನ್ ವಾದನದ ಹಿಮ್ಮೇಳವು ಗಮನ ಸೆಳೆದಿದ್ದು, ಇದರ ಜೊತೆಗೆ ಭಜನೆ ಮತ್ತು ಹಾಡುಗಾರಿಕೆಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಮಧ್ಯರಾತ್ರಿ 1 ಗಂಟೆಯವರೆಗೆ ನಡೆದ ನಾದಸ್ವರ ಮತ್ತಿತರ ಕಾರ್ಯಕ್ರಮಗಳು ಭಕ್ತರನ್ನು ರಂಜಿಸಿದವು. ಸಂಜೆ ಆರು ಗಂಟೆಯಿಂದಲೇ ಅಂತರಗಂಗೆ ಬೆಟ್ಟದ ಕಡೆಗೆ ಬಂದ ಭಕ್ತರು ಪ್ರತಿ ಮೆಟ್ಟಿಲುಗಳ ಮೇಲೆ ಹಾಗೂ ಪುಷ್ಕರಣಿಯ ಸುತ್ತಲೂ ದೀಪಗಳನ್ನು ಬೆಳಗಿಸಿ, ನಂತರ ಶಿವನಿಗೆ ಆರತಿ ಮಾಡುವ ಮೂಲಕ ಶಿವ ದೀಪೋತ್ಸವದಲ್ಲಿ ಪಾಲ್ಗೊಂಡರು.
ಕೋಲಾರ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಬಂದಿದ್ದರಿಂದ, ಗರ್ಭಗುಡಿಯ ಸಾಲಿನಲ್ಲಿ ಭಕ್ತರನ್ನು ನಿಯಂತ್ರಿಸುವಲ್ಲಿ ಪೊಲೀಸರು ಸಹಕರಿಸಿದರು. ಎಲ್ಲಾ ಭಕ್ತರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಇಡೀ ಅಂತರಗಂಗೆಯು ಹಣತೆಗಳ ಬೆಳಕಿನಿಂದ ಕಂಗೊಳಿಸಿದ್ದು, ಮಧ್ಯರಾತ್ರಿವರೆಗೆ ಶಿವನ ಭಕ್ತರು ಶಿವದೀಪೋತ್ಸವದ ಸಂಭ್ರಮದಲ್ಲಿ ಮುಳುಗಿದ್ದರು.
