ಕೋಲ್ಕತ್ತಾ: ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಫುಟ್‌ಬಾಲ್ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ ಅವರ ಬಹುನಿರೀಕ್ಷಿತ ಕಾರ್ಯಕ್ರಮ ತೀವ್ರ ಗೊಂದಲ ಮತ್ತು ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ತಮ್ಮ ಮೆಚ್ಚಿನ ಆಟಗಾರ ಮೆಸ್ಸಿ, ನಿಗದಿತ ಸಮಯಕ್ಕಿಂತ ಬೇಗನೆ ತೆರಳಿದ್ರು, ದುಬಾರಿ ಟಿಕೆಟ್ ಖರೀದಿಸಿದ್ದರೂ ಮೆಸ್ಸಿಯನ್ನು ಸ್ಪಷ್ಟವಾಗಿ ನೋಡಲಾಗಲಿಲ್ಲ ಎಂದು ಅಸಮಾಧಾನ ಭುಗಿಲೆದ್ದಿದ್ದು, ಅಭಿಮಾನಿಗಳು ಬಾಟಲಿ ಎಸೆದು, ಆಸನಗಳನ್ನು ಹಾನಿಗೊಳಿಸುವ ಮೂಲಕ ದಾಂಧಲೆ ನಡೆಸಿದ್ದಾರೆ.
ಲಿಯೋನೆಲ್ ಮೆಸ್ಸಿ ಅವರು ತಮ್ಮ ‘G.O.A.T ಪ್ರವಾಸದ’ ಅಂಗವಾಗಿ ಕೋಲ್ಕತ್ತಾಗೆ ಬಂದಿದ್ದರು. ಮೆಸ್ಸಿಯ ಒಂದು ಝಲಕ್ ನೋಡಲು ಅಭಿಮಾನಿಗಳು ದುಬಾರಿ ಬೆಲೆಯ ಟಿಕೆಟ್‌ಗಳನ್ನು ಖರೀದಿಸಿ ಸ್ಟೇಡಿಯಂಗೆ ಆಗಮಿಸಿದ್ದರು. ಮೂಲಗಳ ಪ್ರಕಾರ, ಮೆಸ್ಸಿ ಅವರು ಸ್ಟೇಡಿಯಂನಲ್ಲಿ ‘ಲ್ಯಾಪ್ ಆಫ್ ಆನರ್’ ಪೂರ್ಣಗೊಳಿಸಿದ ಕೂಡಲೇ ಅನಿರೀಕ್ಷಿತವಾಗಿ ಸ್ಥಳದಿಂದ ಹೊರಟು ಹೋದರು. ತಮ್ಮ ನೆಚ್ಚಿನ ಆಟಗಾರನನ್ನು ಪೂರ್ಣವಾಗಿ ನೋಡಲು ಸಾಧ್ಯವಾಗಲಿಲ್ಲ ಎಂದು ಭಾವಿಸಿದ ಅಭಿಮಾನಿಗಳಲ್ಲಿ ತೀವ್ರ ನಿರಾಶೆ ಮತ್ತು ಕೋಪ ಭುಗಿಲೆದ್ದಿತು. ದುಬಾರಿ ಬೆಲೆ ತೆತ್ತಿದ್ದರೂ ತಮ್ಮ ಆಸೆಗೆ ತಣ್ಣೀರೆರಚಿದ್ದರಿಂದ ಕೋಪಗೊಂಡ ಜನರು ಪ್ರತಿಭಟನೆಗೆ ಇಳಿದರು.ಪ್ರತಿಭಟನೆಯು ಕ್ಷಣಮಾತ್ರದಲ್ಲಿ ಹಿಂಸಾಚಾರಕ್ಕೆ ತಿರುಗಿತು. ಗಲಭೆ ನಡೆಸಿದ ಅಭಿಮಾನಿಗಳು ಸ್ಟೇಡಿಯಂನಲ್ಲಿದ್ದ ಕುರ್ಚಿಗಳು, ನೀರು ಮತ್ತು ತಂಪು ಪಾನೀಯಗಳ ಬಾಟಲಿಗಳನ್ನು ಸ್ಟೇಡಿಯಂ ಸಿಬ್ಬಂದಿ ಮತ್ತು ಇತರ ಪ್ರೇಕ್ಷಕರ ಕಡೆಗೆ ಎಸೆದು ವಾತಾವರಣವನ್ನು ಅಸ್ತವ್ಯಸ್ತಗೊಳಿಸಿದರು. ಈ ಘಟನೆಯ ವಿಡಿಯೋ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವಿಷಾದ ವ್ಯಕ್ತಪಡಿಸಿದ ಸಿಎಂ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ”ಈ ಕಾರ್ಯಕ್ರಮದಲ್ಲಿ ಕಂಡುಬಂದ ಅವ್ಯವಸ್ಥೆ ನನಗೆ ತೀವ್ರ ನೋವು ತಂದಿದೆ. ಇಂತಹ ದುರದೃಷ್ಟಕರ ಘಟನೆಯಿಂದ ಎಲ್ಲ ಅಭಿಮಾನಿಗಳ ಭಾವನೆಗಳು ಆಘಾತಕ್ಕೊಳಗಾಗಿವೆ” ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈ ಗೊಂದಲಮಯ ಪರಿಸ್ಥಿತಿ ಮತ್ತು ಕಳಪೆ ನಿರ್ವಹಣೆಗಾಗಿ ಲಿಯೋನೆಲ್ ಮೆಸ್ಸಿ ಮತ್ತು ಎಲ್ಲ ಕ್ರೀಡಾ ಪ್ರೇಮಿಗಳಲ್ಲಿ ವೈಯಕ್ತಿಕವಾಗಿ ಕ್ಷಮೆಯಾಚಿಸಿದ್ದಾರೆ.
ಉನ್ನತ ಮಟ್ಟದ ತನಿಖೆಗೆ ಆದೇಶ
ಘಟನೆಯ ಗಂಭೀರತೆಯನ್ನು ಮನಗಂಡ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಸಂಪೂರ್ಣ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಈ ಸಮಿತಿಯ ಅಧ್ಯಕ್ಷತೆಯನ್ನು ರಾಜ್ಯದ ನಿವೃತ್ತ ನ್ಯಾಯಾಧೀಶರಾದ ಜಸ್ಟಿಸ್ ಅಶಿಮ್ ಕುಮಾರ್ ರೇ ಅವರು ವಹಿಸಲಿದ್ದಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸಹ ಸಮಿತಿಯ ಸದಸ್ಯರಾಗಿರುತ್ತಾರೆ. ಈ ಸಮಿತಿಯು ಘಟನೆಯ ಬಗ್ಗೆ ಸಮಗ್ರ ವರದಿ ಸಲ್ಲಿಸುವುದು, ಅವ್ಯವಸ್ಥೆಗೆ ಕಾರಣರಾದವರ ಜವಾಬ್ದಾರಿಯನ್ನು ನಿರ್ಧರಿಸುವುದು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಸೂಕ್ತ ಸಲಹೆಗಳನ್ನು ನೀಡುವುದು ಇದರ ಪ್ರಮುಖ ಗುರಿಯಾಗಿದೆ.
ಟಿಎಂಸಿ ದುರಾಡಳಿತದ ಫಲ ಎಂದ ಬಿಜೆಪಿ
ಈ ಘಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷವಾದ ಬಿಜೆಪಿ, ಆಡಳಿತಾರೂಢ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದೆ. ಬಿಜೆಪಿ ಸಂಸದ ಸುಕಾಂತ ಮಜುಂದಾರ್ ಅವರು, “ಮೆಸ್ಸಿಯಂತಹ ಜಾಗತಿಕ ಆಟಗಾರರು ದೇಶದ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿದ್ದರೂ ಎಲ್ಲಿಯೂ ಇಂತಹ ಘಟನೆ ನಡೆದಿಲ್ಲ. ಪಶ್ಚಿಮ ಬಂಗಾಳದಲ್ಲಿ ನಡೆದದ್ದು ಟಿಎಂಸಿ ಸರ್ಕಾರದ ದುರಾಡಳಿತದ ಫಲ” ಎಂದು ಆರೋಪಿಸಿದ್ದಾರೆ. ಇಡೀ ಕಾರ್ಯಕ್ರಮವನ್ನು ಟಿಎಂಸಿ ನಾಯಕರಾದ ಸಚಿವ ಸುಜಿತ್ ಬೋಸ್ ಮತ್ತು ಅರುಪ್ ಬಿಸ್ವಾಸ್ ಅವರ ನೇತೃತ್ವದಲ್ಲಿ ನಿಯಂತ್ರಿಸಲಾಗಿತ್ತು. ಅಲ್ಲದೆ, ಟಿಕೆಟ್‌ಗಳನ್ನು ಕಳ್ಳಸಾಗಣೆ ಮಾಡಲಾಗಿದ್ದು, ಭ್ರಷ್ಟಾಚಾರ ನಡೆದಿದೆ ಎಂದು ಮಜುಂದಾರ್ ಅವರು ಗಂಭೀರ ಆರೋಪ ಮಾಡಿದ್ದಾರೆ. ತನಿಖಾ ಸಮಿತಿಯ ವರದಿಯ ನಂತರವೇ ಘಟನೆಯ ಸಂಪೂರ್ಣ ಸತ್ಯಾಂಶ ಬೆಳಕಿಗೆ ಬರಲಿದ್ದು, ಯಾರು ಜವಾಬ್ದಾರರು ಎಂಬುದು ನಿರ್ಧಾರವಾಗಲಿದೆ.
