ಚಿಕ್ಕಮಗಳೂರು: ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಪರಿಣಾಮ ವಾಣಿಜ್ಯ ಸಿಲಿಂಡರ್ ಗಳ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು ಪ್ರಸ್ತುತ ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮ ಎದುರಿಸುತ್ತಿರುವ ಗಂಭೀರ ಸಂಕಷ್ಟ ಕುರಿತು ಜೆಡಿಎಸ್ ರಾಷ್ಟ್ರೀಯ ವಕ್ತಾರರಾದ ಸುಧಾಕರ್ ಎಸ್. ಶೆಟ್ಟಿ ಅವರು ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಸಚಿವರಾದ ಹರ್ದೀಪ್ ಸಿಂಗ್ ಪುರಿ ರವರಿಗೆ ಮಹತ್ವದ ಪತ್ರ ಬರೆದಿದ್ದಾರೆ.

ಹೌದು ..ಪ್ರಸ್ತುತ ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಾದ್ಯಂತ ಹೋಟೆಲ್‌ಗಳ ಕಾರ್ಯಾಚರಣೆ ತೀವ್ರವಾಗಿ ವ್ಯತ್ಯಯಗೊಂಡಿದ್ದು, ಈ ಕ್ಷೇತ್ರದ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ಕಾರ್ಮಿಕರು ಹಾಗೂ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವುದನ್ನು ಅವರು ಉಲ್ಲೇಖಿಸಿದ್ದಾರೆ. ಹೋಟೆಲ್ ಉದ್ಯಮವು ಕೇವಲ ವ್ಯವಹಾರವಲ್ಲ, ಅದು ಕೋಟ್ಯಾಂತರ ಜನರ ಜೀವನಾಧಾರವಾಗಿದ್ದು, ಸಮಾಜದ ಆರ್ಥಿಕ ಚಟುವಟಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಹೋಟೆಲ್ ಕ್ಷೇತ್ರವು ಕೇವಲ ವ್ಯವಹಾರವಲ್ಲ, ಇದು ದೇಶದಾದ್ಯಂತ ಸುಮಾರು 5 ಕೋಟಿ ಜನರ ಜೀವನಾಧಾರವಾಗಿದೆ. ಆರ್ಥಿಕವಾಗಿ ಹಿಂದುಳಿದವರು, ಅವಿದ್ಯಾವಂತರು ಹಾಗೂ ವಿದ್ಯಾವಂತರನ್ನು ಒಳಗೊಂಡಂತೆ ಎಲ್ಲಾ ವರ್ಗಗಳ ಯುವಕರಿಗೆ ಉದ್ಯೋಗ ಮತ್ತು ಬದುಕಿನ ಆಶ್ರಯ ನೀಡುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ಅಗತ್ಯವಾದ ಅಡುಗೆ ಗ್ಯಾಸ್ ಕೊರತೆಯಿಂದ ಹೋಟೆಲ್‌ಗಳ ಕಾರ್ಯಾಚರಣೆ ವ್ಯತ್ಯಯಗೊಂಡಿದ್ದು, ಹೋಟೆಲ್ ಮಾಲೀಕರು ಹಾಗೂ ಅಗ್ಗದ ಊಟದ ಮೇಲೆ ಅವಲಂಬಿತವಾಗಿರುವ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪರಿಸ್ಥಿತಿ ಸಾವಿರಾರು ಉದ್ಯೋಗಿಗಳನ್ನು ನಿರುದ್ಯೋಗದತ್ತ ತಳ್ಳುತ್ತಿದ್ದು, ಲಕ್ಷಾಂತರ ಕುಟುಂಬಗಳಲ್ಲಿ ಭಯ, ಅನಿಶ್ಚಿತತೆ ಹಾಗೂ ಮನೋಬಲ ಕುಸಿತವನ್ನುಂಟು ಮಾಡುತ್ತಿದೆ. ಆದುದರಿಂದ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗ ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.
ಹೋಟೆಲ್ ಉದ್ಯಮಕ್ಕೆ ನಿರಂತರ ಗ್ಯಾಸ್ ಸರಬರಾಜು, ತಕ್ಷಣದ ಪರಿಹಾರ ಕ್ರಮಗಳು, ವಿದ್ಯುತ್ ಬಿಲ್ ಸಬ್ಸಿಡಿ ಹಾಗೂ ಉದ್ಯೋಗ ರಕ್ಷಣೆಗಾಗಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ. ಸಮಯೋಚಿತ ಹಸ್ತಕ್ಷೇಪದ ಮೂಲಕ ಈ ಕ್ಷೇತ್ರವನ್ನು ಉಳಿಸಿ, ಜನರ ಜೀವನಾಧಾರವನ್ನು ಕಾಪಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ
