ಬಿಸಿ ಬಿಸಿ ಕಾಫಿ ಅಥವಾ ಸಂಜೆಯ ಚಹಾ ಜೊತೆಗೆ ಏನಾದರೂ ಗರಿಗರಿಯಾಗಿ ತಿನ್ನಬೇಕು ಅನ್ನಿಸೋದು ಸಹಜ. ಈ ಸಂಜೆಯ ಸ್ನ್ಯಾಕ್‌ಗೆ ವೆಜ್ ಕಟ್ಲೆಟ್ ಮಾಡಿ ಕೊಟ್ಟರೆ ಮನೆಮಂದಿಯೆಲ್ಲಾ ಫುಲ್ ಖುಷಿಯಾಗ್ತಾರೆ. ಹೊರಗೆ ಕ್ರಿಸ್ಪಿಯಾಗಿ, ಒಳಗೆ ಮಸಾಲೆ, ತರಕಾರಿಗಳ ಮಿಕ್ಸ್— ಯಾರಿಗ್ ತಾನೇ ಇಷ್ಟ ಆಗಲ್ಲ ಹೇಳಿ? ಮನೆಯಲ್ಲಿ ಸುಲಭವಾಗಿ ಈ ರುಚಿಕರ ವೆಜ್ ಕಟ್ಲೆಟ್ ಹೇಗೆ ಮಾಡೋದು ಅಂತ ನೋಡೋಣ ಬನ್ನಿ.
ಸುಮಾರು 10–12 ಕಟ್ಲೆಟ್ ಮಾಡಲು ಬೇಕಾಗುವ ಸಾಮಗ್ರಿಗಳು
- ಆಲೂಗಡ್ಡೆ: 2 (ಬೇಯಿಸಿ, ಸಿಪ್ಪೆ ತೆಗೆದು ಮ್ಯಾಶ್ ಮಾಡಿಟ್ಟುಕೊಳ್ಳಬೇಕು)
- ಕ್ಯಾರೆಟ್: 1 ಕಪ್ (ಸಣ್ಣಗೆ ತುರಿದಿದ್ದು ಅಥವಾ ಹೆಚ್ಚಿದ್ದು)
- ಹಸಿರು ಬಟಾಣಿ: ½ ಕಪ್.
- ಬೀನ್ಸ್: ½ ಕಪ್ (ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ)
- ಕೊತ್ತಂಬರಿ ಸೊಪ್ಪು: 3 ಟೇಬಲ್‌ಸ್ಪೂನ್ ( ಚಿಕ್ಕದಾಗಿ ಹೆಚ್ಚಿಕೊಳ್ಳಬೇಕು)
- ಶುಂಠಿ ಪೇಸ್ಟ್: ¾ ಟೀಚಮಚ
- ಹಸಿಮೆಣಸಿನಕಾಯಿ: 1–2 (ಖಾರಕ್ಕೆ ತಕ್ಕಂತೆ, ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ)
- ಗರಂ ಮಸಾಲ ಪುಡಿ: ½ – ¾ ಟೀಚಮಚ.
- ಉಪ್ಪು: ನಿಮ್ಮ ರುಚಿಗೆ ತಕ್ಕಷ್ಟು
- ಬೈಂಡಿಂಗ್‌ಗಾಗಿ: 6 ಟೇಬಲ್‌ಸ್ಕೂನ್ ಬ್ರೆಡ್‌ಕ್ರಂಬ್ಸ್ (ಅಥವಾ ಅವಲಕ್ಕಿ ಪುಡಿ/ಕಡಲೆ ಹಿಟ್ಟು)
ಕೋಟಿಂಗ್ ಮತ್ತು ಫ್ರೈ ಮಾಡಲು
- ಬ್ಯಾಟರ್ ಮಾಡಿಕೊಳ್ಳಲು: 2 ಟೇಬಲ್‌ಸ್ಕೂನ್ ಕಡಲೆ ಹಿಟ್ಟು ಅಥವಾ ಅಕ್ಕಿ ಹಿಟ್ಟು, ಸ್ವಲ್ಪ ನೀರು ಬೆರೆಸಿ ತೆಳುವಾಗಿ ಕಲಸಿ ಇಟ್ಟುಕೊಳ್ಳಿ.
- ಕ್ರಿಸ್ಪಿ ಲೇಯರ್‌ಗೆ: ~½ ಕಪ್ ಬ್ರೆಡ್‌ಕ್ರಂಬ್ಸ್ ಅಥವಾ ಅವಲಕ್ಕಿ ಪುಡಿ.
- ಎಣ್ಣೆ: ಕರಿಯಲು (ನಿಮ್ಮ ಬಳಕೆಗೆ ಅನುಗುಣವಾಗಿ).
ತಯಾರಿಸುವ ಸುಲಭ ವಿಧಾನ
- ತರಕಾರಿಗಳನ್ನು ಸಿದ್ಧಪಡಿಸಿ
ಮೊದಲಿಗೆ ಆಲೂಗಡ್ಡೆ, ಕ್ಯಾರೆಟ್, ಬೀನ್ಸ್ ಮತ್ತು ಬಟಾಣಿಗಳನ್ನು ಒಟ್ಟಿಗೆ ಪ್ರೆಶರ್ ಕುಕ್ಕರ್‌ನಲ್ಲಿ ಅಥವಾ ಸ್ಟೀಮರ್‌ನಲ್ಲಿ ಬೇಯಿಸಿಕೊಳ್ಳಿ. ನೆನಪಿರಲಿ, ತರಕಾರಿಗಳು ತುಂಬಾ ಮೆತ್ತಗೆ ಆಗಬಾರದು, ಚೆನ್ನಾಗಿ ಬೆಂದಿದ್ದರೆ ಸಾಕು. ತರಕಾರಿಗಳನ್ನು ಬೇಯಿಸಿದ ನಂತರ, ಅದರಲ್ಲಿರುವ ನೀರನ್ನು ಸಂಪೂರ್ಣವಾಗಿ ಸೋಸಿ ತೆಗೆದಿಡಿ. - ಮಿಶ್ರಣ ತಯಾರಿಸಿ
ಬೇಯಿಸಿದ ತರಕಾರಿಗಳನ್ನು ಒಂದು ಪಾತ್ರೆಗೆ ಹಾಕಿ, ಕೈಯಿಂದ ಅಥವಾ ಮ್ಯಾಶರ್ ಬಳಸಿ ಚೆನ್ನಾಗಿ ಮ್ಯಾಶ್ ಮಾಡಿ. ನಂತರ ಇದಕ್ಕೆ ಉಪ್ಪು, ಗರಂ ಮಸಾಲ, ಶುಂಠಿ ಪೇಸ್ಟ್, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. - ಕಟ್ಲೆಟ್‌ಗೆ ಆಕಾರ ನೀಡಿ
ಕಲಿಸಿಟ್ಟಿರುವ ಮಿಶ್ರಣ ಮಿಶ್ರಣ ಸರಿಯಾದ ಬೈಂಡಿಂಗ್ ಆಗಲು ಬ್ರೆಡ್‌ಕ್ರಂಬ್ಸ್ ಅಥವಾ ಅವಲಕ್ಕಿ ಪುಡಿಯನ್ನು ಸೇರಿಸಿ ಮತ್ತೊಮ್ಮೆ ಕಲಸಿ. ಆಗ ಮಿಶ್ರಣ ಕೈಗೆ ಅಂಟದ ಹಾಗೆ ಗಟ್ಟಿ ಹದಕ್ಕೆ ಬರುತ್ತದೆ. ಈ ಹಿಟ್ಟಿನಿಂದ ನಿಮಗೆ ಬೇಕಾದಷ್ಟು ಆಕಾರದಲ್ಲಿ ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು, ಉಂಡೆ ಮಾಡಿ, ನಂತರ ಚಪ್ಪಟೆ ಮಾಡಿ ಕಟ್ಲೆಟ್ ಆಕಾರಕ್ಕೆ ತನ್ನಿ. - ಕೋಟಿಂಗ್ ಮಾಡಿ
ಒಂದು ಬೌಲ್‌ನಲ್ಲಿ ಕಲಸಿ ಇಟ್ಟಿರುವ ಕಡಲೆ ಹಿಟ್ಟಿನ ಬ್ಯಾಟರ್‌ನಲ್ಲಿ ಪ್ರತಿ ಕಟ್ಲೆಟ್ ಅನ್ನು ಒಮ್ಮೆ ಅದ್ದಿ, ನಂತರ ಬ್ರೆಡ್‌ಕ್ರಂಬ್ಸ್ ಇರುವ ತಟ್ಟೆಯಲ್ಲಿ ಹಾಕಿ, ಕಟ್ಲೆಟ್‌ನ ಎಲ್ಲ ಭಾಗಕ್ಕೂ ಪುಡಿ ಅಂಟುವಂತೆ ಚೆನ್ನಾಗಿ ಹೊರಳಿಸಿ. ಹೀಗೆ ಮಾಡಿದರೆ ಹೊರಪದರ ಗರಿಗರಿಯಾಗಿ ಮೂಡಿಬರುತ್ತದೆ. - ಫ್ರೈ ಮಾಡಿ!
ಮಧ್ಯಮ ಉರಿಯಲ್ಲಿ ಎಣ್ಣೆಯನ್ನು ಚೆನ್ನಾಗಿ ಕಾಯಿಸಿ. ಎಣ್ಣೆ ಸರಿಯಾಗಿ ಕಾದ ನಂತರ ಕೋಟ್ ಮಾಡಿದ ಕಟ್ಲೆಟ್‌ಗಳನ್ನು ಒಂದೊಂದಾಗಿ ಹಾಕಿ. ಎರಡೂ ಬದಿಯೂ ಚಿನ್ನದ ಕಂದು ಬಣ್ಣ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ ಹುರಿಯಿರಿ. ಈಗ ನಿಮ್ಮ ಫೇವರಿಟ್ ವೆಜ್ ಕಟ್ಲೆಟ್ ಸವಿಯಲು ಸಿದ್ಧ! ಬಿಸಿಬಿಸಿಯಾಗಿ ಪುದೀನಾ ಚಟ್ನಿ, ಟೊಮೆಟೊ ಸಾಸ್ ಅಥವಾ ನಿಮಗೆ ಇಷ್ಟವಾದ ಯಾವುದೇ ಡಿಪ್ ಜೊತೆಗೆ ಆನಂದಿಸಿ.
