ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಶಾಸನಬದ್ಧ ಅನುದಾನ ಮತ್ತು 15ನೇ ಹಣಕಾಸು ಹಾಗೂ ವರ್ಗ 1ರ ಅನುದಾನ ದುರುಪಯೋಗ ಮಾಡಿದ ಹಿನ್ನೆಲೆಯಲ್ಲಿ ಶಾನುವಳ್ಳಿ ಗ್ರಾಪಂ ಉಪಾಧ್ಯಕ್ಷೆ ನಂದಿನಿ ಸಂತೋಷ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ವಜಾಗೊಳಿಸಿ ಮುಂದಿನ ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಆದೇಶಿಸಿದ್ದಾರೆ.

ಶಾನುವಳ್ಳಿ ಗ್ರಾಪಂನಲ್ಲಿ ನಂದಿನಿ ಸಂತೋಷ್ ಅಧ್ಯಕ್ಷರಾಗಿದ್ದ ವೇಳೆಯಲ್ಲಿ 19 ಕಾಮಗಾರಿಗಳಲ್ಲಿ ಪಂಚಾಯಿತಿ ಅನುದಾನದ ಹಣ ದುರುಪಯೋಗ ಮಾಡಿದ್ದಾರೆ. ಸಾಮಾನ್ಯ ಸಭೆಯ ಅನುಮೋದನೆ ಪಡೆಯದೆ ಹಣ ಪಾವತಿಸಿರುವುದು, ದಾಸ್ತಾನು ಹಾಗೂ ವಿತರಣೆ ವಹಿಯಲ್ಲಿ ಸಾಮಗ್ರಿಗಳನ್ನು ನಮೂದಿಸದಿರುವುದು ಹಾಗೂ ಬಳಕೆಯಾದ ಸ್ಥಳದ ಬಗ್ಗೆ ಬಿಲ್ ನಲ್ಲಿ ದೃಢೀಕರಿಸದಿರುವುದು.
15ನೇ ಹಣಕಾಸು ಯೋಜನೆಯಡಿ ಕೆಟಿಪಿಪಿ ನಿಯಮ ಉಲ್ಲಂಘಿಸಿ ಸಾಮಗ್ರಿ ಖರೀದಿ, ಪಾವತಿ ಮತ್ತು ಕಾಮಗಾರಿ ಅನುಷ್ಠಾನ ಪ್ರಕ್ರಿಯೆಯಲ್ಲಿ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಈ ಆದೇಶ ಹೊರಡಿಸಿದ್ದಾರೆ.
ಶಾನುವಳ್ಳಿ ಗ್ರಾಪಂ ಸದಸ್ಯ ನವೀನ್ ಕರುವಾನೆ 2023ರಲ್ಲಿ ನಂದಿನಿ ಸಂತೋಷ್ ಹಾಗೂ ಪಿಡಿಒ ಚಂದನ್ ವಿರುದ್ಧ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅನರ್ಹಗೊಳಿಸಲು ಆದೇಶ ನೀಡಲಾಗಿದೆ.