ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಮಂಗಳವಾರ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಡಿಫರೆಂಟ್ ಲುಕ್‌ನಲ್ಲಿ ಗಮನಸೆಳೆದರು. ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿದ ಸಿಎಂ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯದಿಂದ ಹೊರಬರುವಾದ ಸಿಎಂ ಹಣೆಯಲ್ಲಿದ್ದ ಕುಂಕುಮ ಹಾಗೂ ಕೇಸರಿ ತಿಲಕ ಅಲ್ಲಿದ್ದವರ ಗಮನಸೆಳೆಯಿತು. ಹೀಗಾಗಿ ಅಲ್ಲಿದ್ದವರೆಲ್ಲ ಸಿದ್ದರಾಮಯ್ಯ ಅವರನ್ನು ಅಚ್ಚರಿಯಿಂದ ನೋಡಿದರು. ನಂತರ ತಾವು ಭಾಗಿಯಾದ ಕಾರ್ಯಕ್ರಮದಲ್ಲೂ ಕುಂಕುಮ, ತಿಲಕದೊಂದಿಗೆ ಪಾಲ್ಗೊಂಡರು.
ಈ ಹಿಂದೆ ಹಲವು ಸಂದರ್ಭದಲ್ಲಿ ಕುಂಕುಮ, ಕೇಸರಿ ಶಾಲು, ಪೇಟ ಧರಿಸುವುದಕ್ಕೆ ಸಿಎಂ ಹಿಂದೇಟು ಹಾಕಿದ್ದರು. ಅನೇಕ ಬಾರಿ ಬಹಿರಂಗವಾಗಿಯೇ ತಿರಸ್ಕರಿಸಿದ್ದರು ಕೂಡಾ. ಹೀಗಾಗಿ ಹಿಂದು ಸಂಘಟನೆಗಳು, ವಿರೋಧ ಪಕ್ಷಗಳು ಹಿಂದು ಧರ್ಮವನ್ನು ಪಾಲಿಸುತ್ತಿಲ್ಲ. ಹಿಂದುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಬೇರೆ ಧರ್ಮವನ್ನು ಓಲೈಸುವುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಅಂತೆಲ್ಲ ಟೀಕಿಸಿದ್ದರು.
ಇದಕ್ಕೆಲ್ಲ ಕೌಂಟರ್ ಕೊಟ್ಟಿದ್ದ ಸಿದ್ದರಾಮಯ್ಯ ಅವರು, ನಾನು ಕೂಡಾ ಹಿಂದು. ಹಿಂದು ದೇವರನ್ನು ನಾನು ಪೂಜಿಸುತ್ತೇನೆ. ಹಾಗಂತ ನಾನು ಅದನ್ನ ಎಲ್ಲರಿಗೂ ಹೇಳಿಕೊಂಡು ತಿರುಗುವ ಅಗತ್ಯವಿಲ್ಲ ಅಂತ ತಿರುಗೇಟು ಕೊಟ್ಟಿದ್ದರು.




