Tumkur Triple Murder Update ತುಮಕೂರಿನಲ್ಲಿ ಕಾರಿನಲ್ಲಿದ್ದವರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರನ್ನು ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು. 11 ದಿನಗಳ ಹಿಂದೆ ಹೋದವರು ನಿನ್ನೆ ಕಾರಿನಲ್ಲಿ ಸುಟ್ಟ ರೀತಿಯಲ್ಲಿ ಪತ್ತೆಯಾಗಿದ್ದರು.
ಇನ್ನು ಸಾವನ್ನಪ್ಪಿದ ಮೂವರು ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಅಸಾಧ್ಯವಾಗಿದೆ. ಹಾಗಾಗಿ ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ.
