ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಹಾಗೂ ಬಯಲು ಸೀಮೆ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭಾರಿ ಹಾನಿ ಸಂಭವಿಸುತ್ತಿದೆ. ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಮತ್ತೆ ತುಂಬಿ ಹರಿಯಲಾರಂಭಿಸಿದ್ದರೆ, ಬಯಲು ಸೀಮೆ ಭಾಗದಲ್ಲಿ ಕೆರೆಗಳು ಕೋಡಿ ಬಿದ್ದಿವೆ. ಅಲ್ಲದೆ ಅಲ್ಲಲ್ಲಿ ಮನೆಗಳಿಗೂ ಹಾನಿಯಾಗಿದೆ. ಇನ್ನು ಚಿಕ್ಕಮಗಳೂರು ತಾಲೂಕಿನಲ್ಲಿ ತರಕಾರಿ ಬೆಳೆಗಳು ಜಲಾವೃತಗೊಂಡಿದ್ದು, ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಪಡುವಂತಾಗಿದೆ.
ಚಿಕ್ಕಮಗಳೂರು ತಾಲೂಕಿನ ಬಂಡಿಹಳ್ಳಿ ಗ್ರಾಮದಲ್ಲಿ ಕಳೆದ ಮರ‍್ನಾಲ್ಕು ದಿನಗಳಿಂದ ಸುರಿಯುತ್ತಿರುವ ಅತಿಯಾದ ಮಳೆಯಿಂದ ಅಕ್ಕಪಕ್ಕದ ಕೆರೆಗಳು ಕೋಡಿಬಿದ್ದು ಹತ್ತಾರು ಎಕರೆ ಕೃಷಿ ಭೂಮಿಯು ನೀರಿನಿಂದ ಮುಳುಗಡೆಗೊಂಡಿದೆ. ಭಾರಿ ಮಳೆಯಿಂದಾಗಿ ಈ ಭಾಗದಲ್ಲಿ ಬೆಳೆದಿರುವ ಹೂ ಕೋಸು, ಅಡಕೆ, ಬಾಳೆ, ಮೆಕ್ಕೆಜೋಳ ಬೆಳೆಗಳು ಸಂಪೂರ್ಣವಾಗಿ ನೀರಿನಿಂದ ಮುಳುಗಡೆಗೊಂಡು ರೈತರಿಗೆ ಕೈಗೆ ಬಂದ ತುತ್ತಾ ಬಾಯಿಗೆ ಬರದಂತಾಗಿದೆ ಎಂದು ಸ್ಥಳೀಯ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇನ್ನು ಕಡೂರು ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಿಂಗಟಗೆರೆ ಹೋಬಳಿಯ ಎಸ್.ಮಾದಾಪುರ ಗ್ರಾಮದ ೧೫ ಎಕರೆ ವಿಸ್ತೀರ್ಣದ ಕೆರೆ ಒಂದೇ ದಿನದ ಮಳೆಗೆ ಭರ್ತಿಯಾಗಿ ಕೋಡಿ ಬಿದ್ದಿದೆ. ಈ ಭಾಗದಲ್ಲಿ ಆಗಾಗ್ಗೆ ಸಾಧಾರಣ ಮಳೆಯಾಗಿದ್ದರಿಂದ ಕೆರೆ ಭರ್ತಿಯಾಗಿರಲಿಲ್ಲ. ಹೀಗಾಗಿ ಬರಗಾಲದ ಛಾಯೆ ಆವರಿಸಿತ್ತು. ಇದೀಗ ಒಂದೇ ದಿನದಲ್ಲಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದರಿಂದ ರೈತರು ಸಂತಸಗೊಂಡಿದ್ದಾರೆ.
ಇನ್ನು ಮಲೆನಾಡು ಭಾಗದಲ್ಲಿ ಅಡಕೆ ಕೊಯ್ಲಿಗೆ ರೈತರು ಸಿದ್ಧತೆ ಆರಂಭಿಸಿದ್ದರು. ಆದರೆ ಇದೀಗ ಧಾರಾಕಾರ ಮಳೆ ಆರಂಭಗೊAಡಿದ್ದರಿAದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅಡಕೆ ಕೊಯ್ಲು ಮಾಡಿದಲ್ಲಿ ಅಡಕೆ ಒಣಗಿಸಲು ಸಾಧ್ಯವಾಗದ ಸ್ಥಿತಿ ಇದೆ. ಇನ್ನು ಅಡಕೆ ಕೊಯ್ಲು ಮಾಡದೇ ಹಾಗೆಯೇ ಬಿಟ್ಟಲ್ಲಿ ಮರದಲ್ಲೇ ಅಡಕೆ ಹಣ್ಣಾಗುವ ಆತಂಕ ಎದುರಾಗಿದೆ.
