ಮೂಡಿಗೆರೆ: ವಿಧಾನಪರಿಷತ್ ನೂತನ ಸದಸ್ಯೆ ಆರತಿ ಕೃಷ್ಣ ಅವರಿಗೆ ಕಾಂಗ್ರೆಸ್ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸ ಲಾಗಿದೆ ಎಂದು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ನಮ್ಮ ಜಿಲ್ಲೆಯವರಾದ ಮಾಜಿ ಶಾಸಕ ಬೇಗಾನೆ ರಾಮಯ್ಯ ಅವರ ಪುತ್ರಿ ಆರತಿಕೃಷ್ಣ ವಿಧಾನಪರಿಷತ್ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದು, ಅವರಿಗೆ ಕಾಂಗ್ರೆಸ್ ತಾಲ್ಲೂಕು ಘಟಕದ ವತಿಯಿಂದ ಶಾಸಕಿ ನಯನಾ ಮೋಟಮ್ಮ ಅವರ ಅಧ್ಯಕ್ಷತೆಯಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲು ನಿರ್ಧರಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಲಾಗಿದೆ. ಕಳೆದ ಶನಿವಾರ ಕಾಂಗ್ರೆಸ್ ನಿಯೋಗ ಬೆಂಗಳೂರಿನ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ಭೇಟಿಯಾಗಿ ಆಹ್ವಾನ ನೀಡಲಾಯಿತು. ಉಪಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಬರಲು ಒಪ್ಪಿಗೆ ಸೂಚಿಸಿದ್ದು, ಅವರ ಅನುಕೂಲ ದಿನಾಂಕವನ್ನು ಪರಿಗಣಿಸಿ ನವೆಂಬರ್‌ನಲ್ಲಿ ಕಾರ್ಯಕ್ರಮ ನಿಗದಿ ಮಾಡಲಾಗುವುದು’ ಎಂದರು.
