ಎನ್ ಆರ್ ಪುರ: ಶೃಂಗೇರಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರೊಂದಿಗೆ ಸೇರಿ ಕಾರ್ಯ ನಿರ್ವಹಿಸಲಾಗುವುದು ಎಂದು ನೂತನ ವಿಧಾನಪರಿಷತ್ ಸದಸ್ಯೆ ಆರತಿಕೃಷ್ಣ ಹೇಳಿದರು.
ಪಟ್ಟಣದ ತಾಲ್ಲೂಕು ಕಾಂಗ್ರೆಸ್ ಕಚೇರಿ ಶನಿವಾರ ತಾಲ್ಲೂಕು ಕಾಂಗ್ರೆಸ್ ಘಟಕ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ವಿಧಾನಪರಿಷತ್ ಸದಸ್ಯೆಯಾಗಿ ನೇಮಕವಾದ ಮೇಲೆ ಚಿಕ್ಕಮಗಳೂರು ಅನ್ನು ನೋಡಲ್ ಜಿಲ್ಲೆಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲಿ ಚಿಕ್ಕಮಗಳೂರು ಅಥವಾ ಶೃಂಗೇರಿಯಲ್ಲಿ ವಿಧಾನಪರಿಷತ್ ಸದಸ್ಯರ ಕಚೇರಿ ಆರಂಭಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ನಮ್ಮ ತಂದೆ ಬೇಗಾನೆ ರಾಮಯ್ಯ ಅವರಿಗೆ ಶೃಂಗೇರಿ ಜನ್ಮಭೂಮಿಯಾದರೆ, ನರಸಿಂಹರಾಜಪುರ ಕರ್ಮಭೂಮಿ ಯಾಗಿದ್ದು ವಕೀಲ ವೃತ್ತಿ ಇಲ್ಲಿಂದಲೇ ಆರಂಭಿಸಿ ಶಾಸಕರಾಗಿದ್ದರು ಎಂದರು.
ನರಸಿಂಹರಾಜಪುರದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ 7ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದೇನೆ. ಕೃಷ್ಣ ಫೌಂಡೇಶನ್ ಮೂಲಕ ತಾಲ್ಲೂಕಿನಲ್ಲಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿಸಲಾಗಿತ್ತು. ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಪರಿಕರ ವಿತರಿಸುವ ಕಾರ್ಯ ಮಾಡಲಾಗಿತ್ತು. ಪ್ರಸ್ತುತ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಅವಕಾಶ ಲಭಿಸಿದೆ. ಕ್ಷೇತ್ರದಲ್ಲಿರುವ ಅರಣ್ಯ ಒತ್ತುವರಿ,ಅಡಿಕೆ, ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಶಾಸಕರೊಂದಿಗೆ ಸೇರಿ ಧ್ವನಿ ಎತ್ತಲಾಗುವುದು. ಶಕ್ತಿ ಮೀರಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ವಿಧಾನಪರಿಷತ್ ಸದಸ್ಯೆ ಆರತಿಕೃಷ್ಣ ಅವರು ವಿದೇಶದಲ್ಲಿ ಸಮಸ್ಯೆಗೆ ಸಿಲುಕಿಕೊಂಡಿದ್ದ ಕ್ಷೇತ್ರದ ಹಲವರನ್ನು ಮರಳಿ ಭಾರತಕ್ಕೆ ಕರೆತರುವಲ್ಲಿ ಶ್ರಮಿಸಿದ್ದಾರೆ. ವೈಯಕ್ತಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಈ ವೇಳೆ ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಸ್.ಡಿ.ರಾಜೇಂದ್ರ, ಕೆ.ಎಂ.ಸುಂದರೇಶ್, ಅಬೂಬಕರ್, ರಘುವೀರ್,ಸುನಿಲ್ ಕುಮಾರ್, ಉಪೇಂದ್ರ, ದೇವಂತ್ ಗೌಡ, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀಜಿತ್, ಪಿ.ಆರ್.ಸದಾಶಿವ, ಜುಬೇದಾ, ಸಾಜು, ಮೀನಾಕ್ಷಿ ಕಾಂತರಾಜ್, ಎಚ್.ಎಂ.ಶಿವಣ್ಣ ಮತ್ತಿತರರಿದ್ದರು.
