ಬೆಂಗಳೂರು: ಶಬರಿಮಲೆ ಮಕರ ಜ್ಯೋತಿ ಮಹೋತ್ಸವಕ್ಕೆ ಆಗಮಿಸುವ ಕೋಟ್ಯಂತರ ಅಯ್ಯಪ್ಪ ಭಕ್ತರ ಯಾತ್ರೆಯನ್ನು ಸುಗಮಗೊಳಿಸಲು ಹಾಗೂ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇರಳ ಸರ್ಕಾರವು ಮಹತ್ವದ ಹೆಜ್ಜೆಯೊಂದನ್ನ ಇಟ್ಟಿದೆ.
ಹೌದು.. ಯಾತ್ರಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಮಾಹಿತಿ ಮತ್ತು ತುರ್ತು ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸಲು ‘ಶಬರಿ ಪೋರ್ಟಲ್’ ಎಂಬ ನೂತನ ಡಿಜಿಟಲ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಇದರ ಮೂಲಕ ಭಕ್ತರು ತಮ್ಮ ಮೊಬೈಲ್ ಫೋನ್ ಅಥವಾ ಕಂಪ್ಯೂಟರ್ ಮೂಲಕವೇ ಸಾರಿಗೆ, ವೈದ್ಯಕೀಯ ಸೇವೆ, ವಿಶ್ರಾಂತಿ ಕೇಂದ್ರಗಳು ಮತ್ತು ದರ್ಶನದ ನಿಖರ ಮಾಹಿತಿಯನ್ನು ಪಡೆಯಬಹುದಾಗಿದೆ.
ಈ ಸೇವೆಗಳನ್ನು ಪಡೆಯಲು ಯಾವುದೇ ಪ್ರತ್ಯೇಕ ಮೊಬೈಲ್ ಅಪ್ಲಿಕೇಶನ್ (App) ಡೌನ್ಲೋಡ್ ಮಾಡುವ ಅಗತ್ಯವಿಲ್ಲ. ಭಕ್ತರು ನೇರವಾಗಿ ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬ್ರೌಸರ್ನಲ್ಲಿ sabariportaldcpta.in ವೆಬ್ಸೈಟ್ ತೆರೆಯುವ ಮೂಲಕ ಎಲ್ಲಾ ಸೇವೆಗಳನ್ನು ಪಡೆಯಬಹುದು. ಇದೇ ವೆಬ್ಸೈಟ್ನಲ್ಲಿ ವರ್ಚುವಲ್ ಕ್ಯೂ (Virtual Queue) ಬುಕಿಂಗ್ಗಾಗಿ ವಿಶೇಷ ಲಿಂಕ್ ಅನ್ನೂ ಒದಗಿಸಲಾಗಿದೆ.
