ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ಮತ್ತು ಶಿವನಿ ಹೋಬಳಿಗಳ ಗ್ರಾಮ ಸಹಾಯಕ ಹುದ್ದೆಗಳಿಗೆ ಡಿಸೆಂಬರ್ 15ರೊಳಗೆ ಅರ್ಜಿ ಆಹ್ವಾನಿಸಲಾಗಿದೆ.
ಹೌದು.. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕು ಕಸಬಾ ಹೋಬಳಿ ಅತ್ತಿಮೊಗ್ಗೆ ವೃತ್ತ, ಶಿವನಿ ಹೋಬಳಿ ತಡಗ ವೃತ್ತದ ಗ್ರಾಮ ಸಹಾಯಕರ ಹುದ್ದೆಗಳಿಗೆ ಗ್ರಾಮ ಸಹಾಯಕರನ್ನು ನೇಮಕಾತಿ ಮಾಡಲು ಉದ್ದೇಶಿಸಿದ್ದು, ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 15 ರೊಳಗೆ ತಾಲೂಕು ತಹಸೀಲ್ದಾರರ ಕಚೇರಿಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವವರು ಸಂಬಂಧಿಸಿದ ವೃತ್ತಗಳ ಕೇಂದ್ರ ಸ್ಥಾನದಲ್ಲಿರಬೇಕು. ಕನಿಷ್ಠ 25 ವರ್ಷ ವಯಸ್ಸಾಗಿದ್ದು, ಈ ಬಗ್ಗೆ ಶಾಲಾ ವರ್ಗಾವಣೆ ಪ್ರಮಾಣ ಪತ್ರ ಸಲ್ಲಿಸಬೇಕು. ಕನಿಷ್ಠ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಶಾಲಾ ಪ್ರಮಾಣ ಪತ್ರ ಅಥವಾ ಅಂಕಪಟ್ಟಿ ಸಲ್ಲಿಸಬೇಕು. ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಹಾಗೂ ಪಡಿತರ ಚೀಟಿಯ ನಕಲನ್ನು ಸಲ್ಲಿಸಬೇಕು. ಕರ್ತವ್ಯ ನಿರ್ವಹಿಸಲು ಸದೃಢವಾಗಿರುವ ಬಗ್ಗೆ ಸ್ಥಳೀಯ ವೈದ್ಯಾಧಿಕಾರಿಯವರಿಂದ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು.
ಅರ್ಜಿಯೊಂದಿಗೆ ಸಲ್ಲಿಸಲಾಗುವ ಎಲ್ಲಾ ಪ್ರಮಾಣ ಪತ್ರಗಳು ಹಾಗೂ ಅಂಕಪಟ್ಟಿಗಳನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ಹೊಂದಿರಬೇಕು ಎಂದು ತಹಸೀಲ್ದಾರರು ತಿಳಿಸಿದ್ದಾರೆ. ಒಟ್ಟಿನಲ್ಲಿ ಸ್ವಂತ ಊರಿನಲ್ಲೇ ಕೆಲಸ ಮಾಡಿಕೊಂಡು ನೆಮ್ಮದಿ ಆಗಿ ಜೀವನ ನಡೆಸಲು ಇದು ಸುವರ್ಣ ಅವಕಾಶವಾಗಿದೆ
