ಚಿಕ್ಕಮಗಳೂರು: ಸ್ನೇಹಿತರ ಜೊತೆ ಮದ್ಯ ಸೇವಿಸಿ ಅಪ್ಪನಿಗೆ ಗೊತ್ತಾದ್ರೆ ಬೈಯುತ್ತಾರೆ ಅಂತ 13 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮೇಲ್ಪಾಲ್ ಗ್ರಾಮದಲ್ಲಿ ನಡೆದಿದೆ.
ಮೃತನನ್ನ 13 ವರ್ಷದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ಮೇಲ್ಪಾಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು. ಮೇಲ್ಪಾಲ್ ಗ್ರಾಮದಲ್ಲಿ ಅದೇ ಗ್ರಾಮಸ್ಥರ ಮದುವೆ ಕಾರ್ಯಕ್ರಮವಿತ್ತು. ಮದುವೆಗೆ ಪೋಷಕರು ಜೊತೆ ಹೋಗಿದ್ದನು.
ಮದ್ವೆ ಮನೆಯಲ್ಲಿ ಸ್ನೇಹಿತರ ಜೊತೆ ಸೇರಿ ಮದ್ಯ ಸೇವಿಸಿದ್ದಾನೆ. ಮದ್ಯ ಸೇವಿಸಿದ ಬಳಿಕ ಕುಡಿದಿರುವುದು ಅಪ್ಪನಿಗೆ ಗೊತ್ತಾದರೆ ಬೈಯುತ್ತಾರೆ ಎಂದು ಮನೆ ಬಳಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನ ಗಮನಿಸಿದ ಪೋಷಕರು ಕೂಡಲೇ ಆತನನ್ನ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲೇ ಬಾಲಕ ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಷಕರು ಮಕ್ಕಳ ಬಗ್ಗೆ ಸದಾ ಎಚ್ಚರಿಕೆ ವಹಿಸಬೇಕಾಗಿದೆ. ಮಕ್ಕಳು ಎಲ್ಲಿರುತ್ತಾರೆ. ಯಾರ ಜೊತೆ ಏನು ಮಾಡುತ್ತಿರುತ್ತಾರೆ ಇವೆಲ್ಲವನ್ನೂ ಪೋಷಕರು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ.
