ಚಿಕ್ಕಮಗಳೂರು: ಇಲ್ಲಿನ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಬಂದ ಸಂದೇಶ ನಂಬಿ ಆಹಾರ ಇಲಾಖೆ ಉಪ ನಿರ್ದೇಶಕರು 50,000 ಗಳನ್ನು ಕಳೆದುಕೊಂಡ ಘಟನೆ ನಡೆದಿದೆ.
ಇಲ್ಲಿನ ಆಹಾರ ಇಲಾಖೆ ಉಪ ನಿರ್ದೇಶಕರಾಗಿರುವ ಯೋಗಾನಂದ ತಮ್ಮ ಸ್ವಂತ ಊರಾದ ಮಂಡ್ಯದ ನಾಗಮಂಗಲಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ವಾಟ್ಸಾಪ್ ಸಂದೇಶ ಬಂದಿದೆ.
ತೆರೆದು ನೋಡಿದಾಗ ಡಿ.ಪಿ.ಯಲ್ಲಿ ಜಿಲ್ಲಾಧಿಕಾರಿಗಳ ಭಾವಚಿತ್ರ ಇದ್ದು, ಪರಿಶೀಲಿಸಿದಾಗ ‘ ಯೋಗಾನಂದ ಹೇಗಿದ್ದೀರಿ, ಈಗ ಎಲ್ಲಿದ್ದೀರಿ ‘ ಎಂಬ ಸಂದೇಶ ಇದ್ದು ಅದಕ್ಕೆ ನಾನು ಚೆನ್ನಾಗಿದ್ದೇನೆ ಎಂದು ಉತ್ತರಿಸಿದ್ದಾರೆ.
ಅದಕ್ಕೆ ಪ್ರತಿಯಾಗಿ ‘ನಾನು ಮೀಟಿಂಗ್ ನಲ್ಲಿದ್ದೇನೆ ,ಆನ್ಲೈನ್ ಬ್ಯಾಂಕಿಂಗ್ ಸಮಸ್ಯೆಯಾಗಿದೆ, ನನಗೆ ಐವತ್ತು ಸಾವಿರ ರೂ.ಗಳ ಅವಶ್ಯಕತೆ ಇದ್ದು, ಸಮಸ್ಯೆ ಸರಿಯಾದ ಮೇಲೆ ಮರುಪಾವತಿಸುವುದಾಗಿ ಸಂದೇಶ ಬಂದಿದೆ.
ಅದಕ್ಕೆ ಸಹ ಮತ ವ್ಯಕ್ತಪಡಿಸಿದ ಯೋಗಾನಂದ ಬ್ಯಾಂಕಿನಿಂದ ಹಣ ಪಡೆದು ಸಂದೇಶದಲ್ಲಿ ನಮೂದಾಗಿದ್ದ ‘ಹೇಮಣ್ಣ ಗೌಡ ಗುಡ್ಡಣ್ಣ ಗೌಡ’ ಹೆಸರಿನ ಅಕೌಂಟಿಗೆ ಹಣ ಜಮೆ ಮಾಡಿದ್ದಾರೆ.
ಮತ್ತೆ 50,000 ಹಾಕುವಂತೆ ಸಂದೇಶ ಬಂದಿದ್ದು,ಇದರಿಂದ ಅನುಮಾನಗೊಂಡು ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರನ್ನು ಸಂಪರ್ಕಿಸಿದಾಗ ಇದು ‘ನಕಲಿ ಖಾತೆ’ ಎಂದು ತಿಳಿದುಬಂದಿದೆ.
ಜಿಲ್ಲಾಧಿಕಾರಿಗಳ ಹೆಸರಿನ ನಕಲಿ ಗ್ರೂಪಿನಿಂದ ಬಂದ ಸಂದೇಶ ನಂಬಿ ವಂಚನೆ ಹೋಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
