ಕೊಟ್ಟಿಗೆಹಾರ : ಮಕ್ಕಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಬಣಕಲ್ ಗ್ಯಾರೇಜ್ ಮಾಲೀಕರ ಹಾಗೂ ಕಾರ್ಮಿಕರ ಸಂಘದ ಅಧ್ಯಕ್ಷ ರವಿ ಹೇಳಿದರು.
ಬಣಕಲ್ ಸರ್ಕಾರಿ ಉರ್ದು ಶಾಲೆಗೆ ಸಂಘದ ವತಿಯಿಂದ ಕ್ರೀಡಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಶಾಲಾ ಮಕ್ಕಳಿಗೆ ಅಗತ್ಯವಿರುವ ಕ್ರೀಡಾ ಸಾಮಗ್ರಿಗಳನ್ನು ಒದಗಿಸುವ ಮೂಲಕ ಅವರ ಕ್ರೀಡಾ ಆಸಕ್ತಿಗೆ ಉತ್ತೇಜನ ನೀಡುವ ಸಣ್ಣ ಪ್ರಯತ್ನ ಇದಾಗಿದೆ. ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡಬೇಕು. ಶಾಲೆಯ ಅಗತ್ಯಗಳಿಗೆ ಮುಂದಿನ ದಿನಗಳಲ್ಲಿಯೂ ಸಂಘದ ವತಿಯಿಂದ ಸಾಧ್ಯವಾದಷ್ಟು ಸಹಕಾರ ನೀಡಲಾಗುವುದು ಎಂದು ರವಿ ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಇದ್ರೀಸ್ ಮಾತನಾಡಿ, ಶಾಲೆಯ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಗ್ಯಾರೇಜ್ ಮಾಲೀಕರು ಹಾಗೂ ಕಾರ್ಮಿಕರ ಸಂಘದವರು ನೀಡಿರುವ ಕೊಡುಗೆ ಶ್ಲಾಘನೀಯ. ಇಂತಹ ಸಮಾಜಮುಖಿ ಕಾರ್ಯಗಳು ಶಾಲೆಯ ಅಭಿವೃದ್ಧಿಗೆ ಮತ್ತಷ್ಟು ಬಲ ನೀಡಲಿವೆ ಎಂದರು.
ಈ ಸಂದರ್ಭದಲ್ಲಿ ಬಣಕಲ್ ಸರ್ಕಾರಿ ಉರ್ದು ಶಾಲೆಯ ಮುಖ್ಯ ಶಿಕ್ಷಕಿ, ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.
ಬಣಕಲ್ ಗ್ಯಾರೇಜ್ ಮಾಲೀಕರ ಹಾಗೂ ಕಾರ್ಮಿಕರ ಸಂಘದ ಉಪಾಧ್ಯಕ್ಷ ಇಂದಾದ್, ಕಾರ್ಯದರ್ಶಿ ಈಶ್ವರ, ಖಜಾಂಚಿ ಇಮ್ರಾನ್ ಹಾಗೂ ಸಹಕಾರ್ಯದರ್ಶಿ ಜೀಶನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
