ಉಡುಪಿ: ಮುಖ್ಯಮಂತ್ರಿ ಕುರ್ಚಿಗೆ ದಿನೇ ದಿನೇ ಪೈಪೋಟಿ ಹೆಚ್ಚಾಗುತ್ತಿದೆ.ಎರಡು ಮೂರು ತಿಂಗಳಿಂದ ಡಿಕೆ ಶಿವಕುಮಾರ್ ಹೇಳಿಕೆ ಗಮನಿಸುತ್ತಿದ್ದೇನೆ. ಬಹಳ ಮಾರ್ಮಿಕವಾಗಿ ಮಾತನಾಡುತ್ತಿದ್ದಾರೆ.ಅವರು ಯಾತಕ್ಕಾಗಿ ಮಾತನಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ,ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ.
ಅಭಿವೃದ್ಧಿ ಕೆಲಸಗಳು ನಡೀತಾ ಇಲ್ಲ. ಅಭಿವೃದ್ಧಿ ಇಲ್ಲದೆ ರಾಜ್ಯದ ಜನ ಪರದಾಡುತ್ತಿದ್ದಾರೆ.ಆಡಳಿತ ಪಕ್ಷದ ಶಾಸಕರೇ ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ.
ರಾಜ್ಯದಲ್ಲಿ ಚುನಾಯಿತ ಸರಕಾರ ಇದೆ ಅನ್ನೋದೇ ಮರೆತು ಹೋಗಿದೆ.ಬಡವ ರೈತ ಹಿಂದೂ ವಿರೋಧಿ ಸರಕಾರ ರಾಜ್ಯದಲ್ಲಿದೆ.ಎಷ್ಟು ಬೇಗ ಈ ಸರಕಾರ ಕಿತ್ತು ಹಾಕಿದರೆ ಜನರಿಗೆ ಅಷ್ಟು ಅನುಕೂಲ ಆಗಲಿದೆ. ನವಂಬರ್ ಕ್ರಾಂತಿಯ ಬಗ್ಗೆ ಆಡಳಿತ ಪಕ್ಷದ ಸಚಿವರು ಮತ್ತು ಶಾಸಕರೇ ಹೇಳಿಕೆ ನೀಡುತ್ತಿದ್ದಾರೆ.ರಾಜ್ಯದಲ್ಲಿ ಅಭಿವೃದ್ಧಿಯ ಬಗ್ಗೆ ಯಾವುದೇ ಚರ್ಚೆ ಆಗುತ್ತಿಲ್ಲ.ಕ್ರಾಂತಿಗಳ ಬಗ್ಗೆ ಮಾತನಾಡುತ್ತಾ ಕೂತಿದ್ದಾರೆ.
ಆಡಳಿತ ಪಕ್ಷದ ಸಚಿವರ ಹೇಳಿಕೆ ಗಮನಿಸಿದರೆ ಅರ್ಧದಷ್ಟು ಸಚಿವರು ಮುಖ್ಯಮಂತ್ರಿ ಬದಲಾವಣೆಗಾಗಿ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
