Friday, March 27, 2026
Homeರಾಜಕೀಯದಾಖಲೆಯ 10ನೇ ಬಾರಿಗೆ ಸಿಎಂ ಆಗಿ ಪದಗ್ರಹಣ ಮಾಡಿದ ನಿತೀಶ್ ಕುಮಾರ್; ಮೋದಿ ಸೇರಿದಂತೆ ಘಟಾನುಘಟಿ...

ದಾಖಲೆಯ 10ನೇ ಬಾರಿಗೆ ಸಿಎಂ ಆಗಿ ಪದಗ್ರಹಣ ಮಾಡಿದ ನಿತೀಶ್ ಕುಮಾರ್; ಮೋದಿ ಸೇರಿದಂತೆ ಘಟಾನುಘಟಿ ನಾಯಕರು ಭಾಗಿ

ಬಿಹಾರ: ಅಸೆಂಬ್ಲಿ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಭರ್ಜರಿ ಗೆಲುವಿನ ಬಳಿಕ ದಾಖಲೆಯ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ( Nithish Kumar) ಅವರು ಗುರುವಾರ ಪಾಟ್ನಾದ ಗಾಂಧಿ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ನಿತೀಶ್‌ ಕುಮಾರ್‌ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.  26 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಕೇಸರಿಮಯವಾದ ಗಾಂಧಿ ಮೈದಾನ

ಪಾಟ್ನಾದ ಗಾಂಧಿ ಮೈದಾನದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಜನ ಸೇರಿದ್ದು, ಇಡೀ ಮೈದಾನ ಕೇಸರಿಮಯವಾಗಿತ್ತು. ಪದಗ್ರಹಣ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರು ಮತ್ತು 11 ಎನ್‌ಡಿಎ-ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಇತರ ಘಟಾನುಘಟಿ ನಾಯಕರುಗಳು ಭಾಗವಹಿಸಿದ್ದರು.

ಕಳೆದ ವಾರ ನಡೆದಿದ್ದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ೨೦೨ ಸ್ಥಾನಗಳನ್ನು ಪಡೆಯುವ ಪ್ರಬಲ ಕೂಟವಾಗಿ ಹೊರಹೊಮ್ಮಿತ್ತು. ಬಿಜೆಪಿ ತಾನು ಸ್ಪರ್ಧಿಸಿದ್ದ 101 ಕ್ಷೇತ್ರಗಳಲ್ಲಿ 89ರಲ್ಲಿ, ಜೆಡಿಯು 101ಕ್ಷೇತ್ರಗಳ ಪೈಕಿ 85ರಲ್ಲಿ, ಎಲ್‌ಜೆಪಿ 29ರ ಪೈಕಿ 19ರಲ್ಲಿ, ಎಚ್‌ಎಎಂ 6ರ ಪೈಕಿ 4ರಲ್ಲಿ ಜಯ ಸಾಧಿಸಿವೆ. ಆರ್‌ಜೆಡಿ 143ರ ಪೈಕಿ ಕೇವಲ 25, ಕಾಂಗ್ರೆಸ್‌ 61ರ ಪೈಕಿ ಕೇವಲ 6 ಸ್ಥಾನಗಳಲ್ಲಿ ಗೆದ್ದು ಹೀನಾಯ ಸೋಲಿಗೆ ಸಾಕ್ಷಿಯಾಗಿವೆ. ಇತರರು 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ

ಟ್ವೀಟ್‌ ಮಾಡಿ ಮೋದಿ ಅಭಿನಂದನೆ

ಸಮಾರಂಭದಲ್ಲಿ ಭಾಗಿಯಾದ ನಂತರ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ “ಬಿಹಾರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ಸಹೋದ್ಯೋಗಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇದು ಸಮರ್ಪಿತ ನಾಯಕರ ಅದ್ಭುತ ತಂಡ, ಇದು ಬಿಹಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಅವರೆಲ್ಲರಿಗೂ ನನ್ನ ಶುಭಾಶಯಗಳು!” ಎಂದು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!