ಚಿಕ್ಕಮಗಳೂರು: ಕಾಫಿನಾಡಿನಲ್ಲಿ ನವೆಂಬರ್ 26 ರಿಂದ ಡಿಸೆಂಬರ್ 4ರವರೆಗೆ ನಡೆಯಲಿರುವ ದತ್ತಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸಲೀಂ ಭಾನುವಾರ ನಗರಕ್ಕೆ ಭೇಟಿನೀಡಿದ್ದು, ಬಂದೋಬಸ್ತ್ ಕುರಿತು ಉನ್ನತ ಮಟ್ಟದ ಚರ್ಚೆ ನಡೆಸಿದ್ದಾರೆ.

ದತ್ತಜಯಂತಿ ಬಂದೋಬಸ್ತ್ ಪರಿಶೀಲನೆಗಾಗಿ ಡಿಜಿಪಿ ಮಟ್ಟದ ಅಧಿಕಾರಿಯೊಬ್ಬರು 2005ರ ನಂತರ ಕಾಫಿನಾಡಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಜಿಲ್ಲಾಪೊಲೀಸ್ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ಬಂದೋಬಸ್ತ್ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.
ಡಿಜಿಪಿ ಸಲೀಂ ಅವರು ಎಸ್ಪಿ ಕಚೇರಿಯಲ್ಲಿ ಸುದೀರ್ಘ ಸಭೆ ನಡೆಸಿ, ಭದ್ರತಾ ಸಿದ್ಧತೆಗಳ ಕುರಿತು ಮಾಹಿತಿ ಪಡೆದರು. ಈ ಬಾರಿ ಒಟ್ಟು 9 ದಿನಗಳ ಕಾಲ ಚಿಕ್ಕಮಗಳೂರು ಸೂಕ್ಷ್ಮ ಜಿಲ್ಲೆಯಾಗಲಿದ್ದು, ವಿಶೇಷವಾಗಿ ಡಿಸೆಂಬರ್ 2, 3 ಮತ್ತು4 ರಂದು ಪರಿಸ್ಥಿತಿ ಅತಿ ಸೂಕ್ಷ್ಮವಾಗಿರಲಿದೆ. ಈ ಬಾರಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಜೊತೆಗೆ ಶ್ರೀರಾಮಸೇನೆಯೂ ಸೇರ್ಪಡೆಗೊಂಡಿರುವುದರಿಂದ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ.
ಡಿಸೆಂಬರ್ 4ರಂದು ಒಂದೇ ದಿನ ಸುಮಾರು ೨೦ ಸಾವಿರಕ್ಕೂ ಹೆಚ್ಚು ಭಕ್ತರು ಚಿಕ್ಕಮಗಳೂರು ತಾಲ್ಲೂಕಿನ ದತ್ತಪೀಠಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ಭದ್ರತೆ, ಪೊಲೀಸ್ ಸಿಬ್ಬಂದಿಯ ನಿಯೋಜನೆ ಮತ್ತು ಕಣ್ಣಾವಲು ವ್ಯವಸ್ಥೆ ಕುರಿತು ಡಿಜಿಪಿ ಸಲೀಂ ಅವರು ಚರ್ಚೆ ನಡೆಸಿ, ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಎಸ್ಪಿ ವಿಕ್ರಂ ಅಮಟೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಇದ್ದರು.
