ಮೂಡಿಗೆರೆ: ಜೀವನದಲ್ಲಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಇಚ್ಛಾಶಕ್ತಿ, ಸಕಾರಾತ್ಮಕ ಚಿಂತನೆ ಹಾಗೂ ದೃಢ ಸಂಕಲ್ಪ ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬದುಕು ಕೇವಲ ಲೆಕ್ಕಾಚಾರಕ್ಕೆ ಸೀಮಿತವಾಗದೆ, ಸಮಾಜದ ಏಳಿಗೆ ಮತ್ತು ಸುಧಾರಣೆಯ ಆಶಯದೊಂದಿಗೆ ಸಾಗಿದಾಗ ಮಾತ್ರ ನಮ್ಮ ಬದುಕಿಗೂ ನಿಜವಾದ ಅರ್ಥ ದೊರೆಯುತ್ತದೆ. ರಾಜಕಾರಣಿಗಳು ಭಾಷಣ ಮಾಡುವ ಸಂದರ್ಭದಲ್ಲಿ ರೈತರನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಾರೆ. ಆದರೆ ರೈತರು ಸಂಕಷ್ಟಕ್ಕೆ ಸಿಲುಕಿದಾಗ ಅವರ ಸಮಸ್ಯೆಗಳನ್ನು ಪರಿಹರಿಸುವ ಭರವಸೆಗಳು ಮರೆತುಹೋಗುತ್ತವೆ. ರೈತರ ಬದುಕು ಹಸನಾಗಬೇಕಾದರೆ ಕೇವಲ ಭಾಷಣಗಳಲ್ಲಿ ರೈತರ ಪರ ಕಾಳಜಿ ವ್ಯಕ್ತಪಡಿಸುವುದಷ್ಟೇ ಸಾಲದು. ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಕೃಷಿಗೆ ಪೂರಕವಾದ ಅನುಕೂಲಕರ ವಾತಾವರಣ ನಿರ್ಮಿಸಿಕೊಡುವ ಜವಾಬ್ದಾರಿಯನ್ನು ಜನಪ್ರತಿನಿಧಿಗಳು ನಿಭಾಯಿಸಬೇಕೆಂದು ಹೇಳಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ರೈತರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಹಕಾರಿ ಸಂಸ್ಥೆಗಳು ಮಹತ್ವದ ಕೊಡುಗೆ ನೀಡುತ್ತಿವೆ. ಸಂಸ್ಥೆಗಳು ರೈತರ ಸಂಕಷ್ಟಗಳಿಗೆ ಸ್ಪಂದಿಸಿ, ಅವರ ಆರ್ಥಿಕ ಮತ್ತು ಸಾಮಾಜಿಕ ಬದುಕು ಸುಧಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ಮಾಕೋನಹಳ್ಳಿ, ಬಣಕಲ್, ಇಡಕಣಿ ಸಹಕಾರ ಸಂಸ್ಥೆಯಂತೆ ಎಲ್ಲಾ ಸಹಕಾರಿ ಸಂಸ್ಥೆಗಳು ಮುಂಚೂಣಿಯಲ್ಲಿ ಸಾಗಬೇಕೆಂದು ಹಾರೈಸಿದರು.
ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಮತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎನ್.ಅಶ್ವಥ್ ಮಾತನಾಡಿ, ನಮ್ಮ ಸಂಸ್ಥೆ ಆರಂಭದಿಂದಲೂ ಉತ್ತಮವಾಗಿ ಸಾಗುತ್ತಿದೆ. 86 ಲಕ್ಷ ರೂ ದೇಣಿಗೆ ಮೂಲಕ ಸಂಗ್ರಹಿಸಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ರೈತರಿಗೆ ಅಗತ್ಯವಾದ ಗೊಬ್ಬರ, ಕೃಷಿ ಯಾಂತ್ರೀಕರಣ, ಸಾಲ ಸೌಲಭ್ಯ ಸೇರಿದಂತೆ ಎಲ್ಲಾ ಬಗೆಯ ಸವಲತ್ತು ನೀಡಲಾಗುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳಿ ನಿರ್ದೇಶಕ ಬಿ.ಸಿ.ಲೋಕಪ್ಪಗೌಡ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ, ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ.ದಿವಾಕರ್ ವಹಿಸಿದ್ದರು. ಟಿಎಪಿಸಿಎಂಸ್ ಅಧ್ಯಕ್ಷ ಎಂ.ಎಲ್.ಕಲ್ಲೇಶ್, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಭಾಲಕೃಷ್ಣ, ಕೆ.ರಾಜಮ್ಮ, ಓ.ಎಸ್.ಗೋಪಾಲಗೌಡ, ಬಿ.ಎಸ್.ನಾರಾಯಣಗೌಡ, ರಾಜೇಂದ್ರ ಪ್ರಸಾಧ್, ಎಂ.ಎಸ್.ದಯಾನಂದ್, ಡಿ.ಬಿ.ಜಯಪ್ರಕಾಶ್, ಪುಟ್ಟಮ್ಮ, ಭಾನುಮತಿ, ಎಚ್.ಕೆ.ಪೂರ್ಣೇಶ್, ಎಚ್.ಟಿ.ಪ್ರಸನ್ನ, ಎಂ.ಜಿ.ಪ್ರವೀಣ್, ಎಂ.ಎಸ್.ಪ್ರಸನ್ನ, ಡಿ.ಜಿ.ರಂಜಿತ್ ಮತ್ತಿತರರಿದ್ದರು.
