ಚಿಕ್ಕಮಗಳೂರು: ಮೂಡಿಗೆರೆ ಹಾಗೂ ಕಳಸ ತಾಲೂಕುಗಳಲ್ಲಿ ಕಳೆದ 2024–25ರ ಬೆಳೆಗಾಲದಲ್ಲಿ ತೀವ್ರ ಮಳೆ ಮತ್ತು ಗಾಳಿಯಿಂದ ಕಾಳುಮೆಣಸು ಹಾಗೂ ಆಡಿಕೆ ಹಾನಿಗೊಳಗಾದರೂ, ವಿಮಾ ಸಂಸ್ಥೆಗಳು ಪಾವತಿಸುತ್ತಿರುವ ಪರಿಹಾರ ಮೊತ್ತ ಅತ್ಯಲ್ಪವಾಗಿರುವುದರಿಂದ ರೈತರ ಅಸಮಾಧಾನ ಹೆಚ್ಚಾಗಿದೆ. ವಿಮಾ ಕಂಪನಿಗಳು ಪರಿಹಾರವನ್ನು ಲೆಕ್ಕ ಹಾಕಲು ಬಳಸುವ ಮಾನದಂಡಗಳನ್ನು ಇನ್ನೂ ತೆರೆಯಿಡದಿರುವುದು ಗಂಭೀರ ವಿಚಾರವೆಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ ಹೇಳಿಕೆಯಲ್ಲಿ ತಿಳಿಸಿದೆ.
ಆ ಅವಧಿಯಲ್ಲಿ ಹವಾಮಾನ ವೈಪರೀತ್ಯ ಗಂಭೀರ ರೂಪ ಧರಿಸಿದ್ದನ್ನು ಸರ್ಕಾರಿ ವರದಿಗಳು ಸ್ಪಷ್ಟಪಡಿಸುತ್ತವೆ. ಜಿಲ್ಲಾಧಿಕಾರಿಗಳ ಆದೇಶದಂತೆ ಮಲೆನಾಡು ಭಾಗದ ಶಾಲಾ–ಕಾಲೇಜುಗಳಿಗೆ ಸುಮಾರು 15 ದಿನ ರಜೆ ಘೋಷಿಸಲಾಗಿತ್ತು. ಪ್ರವಾಸಿಗರ ಸಂಚಾರಕ್ಕೆ ನಿಯಂತ್ರಣ ಹೇರಲಾಗಿತ್ತು. ಚಾರ್ಮಾಡಿ ಘಟ್ಟದಲ್ಲಿ ರಾತ್ರಿ ಸಂಚಾರ ನಿಷೇಧ ಜಾರಿಯಲ್ಲಿತ್ತು. ಅಲ್ಲದೆ ಕಂದಾಯ, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಜಂಟಿ ಸಮೀಕ್ಷೆಯಲ್ಲಿಯೇ ಮೂಡಿಗೆರೆ–ಕಳಸ ವ್ಯಾಪ್ತಿಯಲ್ಲಿ ಶೇ. 33–35ರಷ್ಟು ಬೆಳೆ ಹಾನಿ ಸಂಭವಿಸಿದೆ ಎಂದು ವರದಿ ದೃಢಪಡಿಸಿದೆ.
ಈಗ ವಿಮಾ ಕಂಪನಿಗಳು ನೀಡುತ್ತಿರುವ ಪೇಔಟ್ ಅತಿ ಕಡಿಮೆ ಆಗಿರುವುದನ್ನು ವಿರೋಧಿಸಿ ಬೆಳೆಗಾರರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರೀಮಿಯಂ ಪಾವತಿಯಲ್ಲಿ ರೈತರ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರವೂ ಪಾಲ್ಗೊಳ್ಳುತ್ತಿದ್ದರೂ, ಅಂತಿಮ ಪಾವತಿಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಪ್ರಶ್ನಾರ್ಹವಾಗಿದೆ. ಮಳೆ ಮತ್ತು ಹವಾಮಾನ ಮಾಪನ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸದಿರುವ ಪರಿಸ್ಥಿತಿಯಲ್ಲಿ ವಿಮಾ ಕಂಪನಿಗಳು ಹಾನಿ ಗಣನೆಯನ್ನು ಹೇಗೆ ನಿರ್ಧರಿಸುತ್ತವೆ ಎಂಬುದನ್ನೂ ಸಂಘ ಪ್ರಶ್ನಿಸಿದೆ.
ಬಿ. ಆರ್.ಬಾಲಕೃಷ್ಣ ಬಾಳೂರು ಬೆಳೆಗಾರರ ಅಧ್ಯಕ್ಷ ಮಾತನಾಡಿ,
“ರೈತರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವಾಗ ವಿಮೆಯೇ ತುಡಿದು ಹಿಂದೆ ಸರಿದಂತೆ ವರ್ತಿಸುತ್ತಿದೆ. ಪ್ರೀಮಿಯಂ ನಮ್ಮಿಂದ ಹಾಗೂ ಸರ್ಕಾರದಿಂದ ಪಾವತಿಯಾಗುತ್ತಿದೆಯಾದರೂ ಪರಿಹಾರ ಯಾವ ಆಧಾರದ ಮೇಲೆ ನೀಡಲಾಗುತ್ತಿದೆ ಎಂಬುದು ತಿಳಿದಿಲ್ಲ. ಮಾನದಂಡವೇ ಗೊತ್ತಿಲ್ಲದ ವಿಮೆ ರೈತರ ಬದುಕಿಗೆ ಬೆಂಬಲ ನೀಡುವುದೇ ಹೇಗೆ?” ಎಂದು ಅವರು ಕಿಡಿಕಾರಿದರು.
ಕೆ. ಡಿ. ಮನೋಹರ್ ಸಂಘದ ಕಾರ್ಯದರ್ಶಿ ಅವರು ಮಾತನಾಡಿ,
“ಮೂಡಿಗೆರೆ–ಕಳಸದಲ್ಲಿ ಅಧಿಕೃತ ಸಮೀಕ್ಷೆಯಲ್ಲೇ ಶೇ. 35ರಷ್ಟು ಹಾನಿ ದೃಢವಾಗಿದೆ. ಆದರೆ ವಿಮಾ ಪೇಔಟ್ ಇದಕ್ಕೇ ಸರಿಯಾಗಿಲ್ಲ. ಹವಾಮಾನ ಮಾಪನ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸದಾಗ ವಿಮಾ ಕಂಪನಿ ಅಂದಾಜು ಹೇಗೆ ಮಾಡುತ್ತಿದೆ? ನಷ್ಟಕ್ಕಿಂತ ಪಾವತಿ ಕಡಿಮೆಯಾದರೆ ವಿಮೆಯ ಅಸ್ತಿತ್ವಕ್ಕೂ ಅರ್ಥವೇನು?” ಎಂದು ಪ್ರಶ್ನಿಸಿದರು.
ಸಂಘದ ಆಗ್ರಹ:
ವಿಮಾ ಪಾವತಿಯ ಮಾನದಂಡ ತಕ್ಷಣ ಬಹಿರಂಗಗೊಳಿಸಬೇಕು
ತೋಟಗಾರಿಕೆ–ಕೃಷಿ–ವಿಮೆ ಸಂಸ್ಥೆಗಳ ಕಾರ್ಯವಿಧಾನದಲ್ಲಿ ಪಾರದರ್ಶಕತೆ ತರಬೇಕು
ದೃಢಪಡಿಸಿದ ನಷ್ಟಕ್ಕೆ ಅನುಗುಣವಾಗಿ ಸಮರ್ಪಕ ಪರಿಹಾರ ನೀಡಬೇಕು
ಸರ್ಕಾರ ವಿಮಾ ಕಂಪನಿಗಳಿಗೆ ತಕ್ಷಣ ಕಠಿಣ ಸೂಚನೆ ನೀಡಬೇಕು
“ರೈತರಿಗೆ ರಕ್ಷಣೆ ನೀಡುವುದೇ ಉದ್ದೇಶವಾಗಿ ಇರುವ ವಿಮೆಯು ಸಂಕಷ್ಟದ ವೇಳೆಯಲ್ಲಿ ನೆರವಾಗದಿದ್ದರೆ, ಯೋಜನೆಯ ಅಸ್ತಿತ್ವವೂ ನಿರರ್ಥಕವಾಗುತ್ತದೆ” ಎಂದು ಸಂಘ ಹೇಳಿಕೆಯಲ್ಲಿ ಒತ್ತಿ ಹೇಳಿದೆ.
