ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬುಧವಾರ ಹೈಕೋರ್ಟ್ ಆಘಾತ ನೀಡಿದೆ. ಮನೆ ಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ, ಕರ್ನಾಟಕ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯ ವಿಚಾರಣೆ ಸಂದರ್ಭದಲ್ಲಿ, ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ನೀಡುವಂತೆ ಕೋರಿದ್ದ ಮಧ್ಯಂತರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳು ಕೆ.ಎಸ್. ಮುದಗಲ್ ಮತ್ತು ಟಿ. ವೆಂಕಟೇಶ್ ನಾಯ್ಕ್ ಅವರನ್ನೊಳಗೊಂಡ ವಿಭಾಗ ಪೀಠ ಈ ನಿರ್ಧಾರ ಪ್ರಕಟಿಸಿದೆ.
ಪ್ರಕರಣದ ಹಿನ್ನೆಲೆ
ಹಾಸನ ಜಿಲ್ಲೆಯ ಹೊಳೆನರಸೀಪುರದ ಗನ್ನಿಕಾಡದ ತೋಟದ ಮನೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ 48 ವರ್ಷದ ಮಹಿಳೆಯ ಮೇಲೆ 2021ರಲ್ಲಿ ಹಾಸನದ ತೋಟದ ಮನೆ ಮತ್ತು ಬೆಂಗಳೂರಿನ ನಿವಾಸದಲ್ಲಿ ಆಕೆಯ ಮೇಲೆ ಎರಡು ಬಾರಿ ಅತ್ಯಾಚಾರ ನಡೆದಿದೆ ಎಂಬ ಆರೋಪದ ಮೇಲೆ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕೃತ್ಯವನ್ನು ಆರೋಪಿ ಪ್ರಜ್ವಲ್ ರೇವಣ್ಣ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ಹೊರಬಂದಿತ್ತು. ಆಗಸ್ಟ್ 2 ರಂದು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅವರನ್ನು ಅಪರಾಧಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆಯೊಂದಿಗೆ 11.50 ಲಕ್ಷ ರೂ. ದಂಡವನ್ನೂ ವಿಧಿಸಿತ್ತು. ಅದರಲ್ಲಿ ಹೆಚ್ಚಿನ ಮೊತ್ತವನ್ನು ಸಂತ್ರಸ್ತೆಗೆ ಪಾವತಿಸುವಂತೆ ಸೂಚಿಸಲಾಗಿತ್ತು.
ಪ್ರಜ್ವಲ್ ವಾದವೇನು?
ತೀರ್ಪು ವಿರುದ್ಧ ಮೇಲ್ಮನವಿ ಸಲ್ಲಿಸಿದ ಪ್ರಜ್ವಲ್ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸಿದ್ದರು. ಮಹಿಳೆಯ ಆರೋಪವನ್ನು ಅಲ್ಲಗಳೆದಿದ್ದ ರೇವಣ್ಣ, ಮಹಿಳೆ 3 ವರ್ಷದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ . ಪ್ರಕರಣ ದಾಖಲಾಗುವ ಮೊದಲು ಪ್ರಜ್ವಲ್ ದೇಶವನ್ನು ತೊರೆದು ಹೋಗಿದ್ದರೂ ಅದು ಪರಾರಿಯ ಉದ್ದೇಶದಿಂದಲ್ಲ, ಹಾಗೂ ಪ್ರಜ್ಚಲ್ ವಿರುದ್ಧದ ಸಾಕ್ಷ್ಯಗಳಲ್ಲಿ ಹಲವು ಶಂಕೆಗಳಿವೆ ಎಂದು ವಾದ ಮಂಡಿಸಿದ್ದರು. ರೂಮಿನಲ್ಲಿ ಬಟ್ಟೆ, ಕೂದಲಿದ್ದ ಬ್ಯಾಗ್ ಅನ್ನು ಮಹಿಳೆ ಗುರುತಿಸಿಲ್ಲ. ಬ್ಯಾಟರಿ, ಪೇಂಟ್ ಇದ್ದ ರೂಮಿನಲ್ಲಿ ಮಹಿಳೆಯ ಉಡುಪು ಸಿಕ್ಕಿತೆಂದು ಹೇಳಿದ್ದಾರೆ. ಲಾಕ್ ಆಗಿದ್ದ ರೂಮಿನಲ್ಲಿ ವೀರ್ಯಾಣುವಿದ್ದ ಬಟ್ಟೆ ಸಿಗಲು ಸಾಧ್ಯವೇ? ವಿಡಿಯೋ ಇತ್ತೆಂದು ಆರೋಪಿಸಲಾದ ಮೊಬೈಲ್ ಅನ್ನೇ ವಶಕ್ಕೆ ಪಡೆದಿಲ್ಲ ಎಂದು ಹತ್ತಾರು ಪ್ರಶ್ನೆಗಳನ್ನ ಮುಂದಿಟ್ಟು . ಜಾಮೀನು ಕೊಡಬೇಕೆಂದು ಮನವಿ ಮಾಡಲಾಗಿತ್ತು. ಅಲ್ಲದೇ ಶಿಕ್ಷೆ ರದ್ದುಪಡಿಸುವಂತೆ ಪ್ರಜ್ವಲ್ ರೇವಣ್ಣ ಪರ ವಕೀಲರು ಹೈಕೋರ್ಟ್ ಗೆ ಸಲ್ಲಿಸಿರುವ ಮೇಲ್ಮನವಿಯನ್ನೂ ಸಲ್ಲಿಸಿದ್ದರು
ಆದರೆ, ಈ ವಾದಗಳನ್ನು ಪರಿಗಣಿಸಿದ ಹೈಕೋರ್ಟ್, ಕೆಳ ನ್ಯಾಯಾಲಯದ ತೀರ್ಪನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಅಥವಾ ಜಾಮೀನು ನೀಡಲು ಆಧಾರಗಳಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಜೈಲಿನಿಂದ ಹೊರಬರುವ ಸಾಧ್ಯತೆ ಇನ್ನೂ ದೂರವಾಗಿದೆ.
2024ರ ಲೋಕಸಭೆ ಚುನಾವಣಾ ಅವಧಿಯಲ್ಲಿ ಹಾಸನದಲ್ಲಿ ಪ್ರಜ್ವಲ್ ಸಂಬಂಧಿತವಾಗಿ 2,900ಕ್ಕೂ ಹೆಚ್ಚು ಅಶ್ಲೀಲ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ವು. ಇದರಿಂದ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಬಂದಿತ್ತು.
