ಮೂಡಿಗೆರೆ: ದೀಪಾವಳಿ ಹಬ್ಬದ ಬಾಡೂಟಕ್ಕಾಗಿ ವನ್ಯಜೀವಿಗಳನ್ನು ಭೇಟೆಯಾಡಿದ್ದ ಜಾಲವೊಂದನ್ನು ಮೂಡಿಗೆರೆ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಭೇದಿಸಿದ್ದಾರೆ.
ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಕಾಡುಪ್ರಾಣಿಗಳ ಶಿಕಾರಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ್ದ ಅಧಿಕಾರಿಗಳು ಈ ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ಕಡವೆ ಹಾಗೂ ಕಾಡು ಕುರಿಯನ್ನು ಹೊಡೆದು ತಂದಿದ್ದ ಈ ತಂಡ, ಬಿನ್ನಡಿ ಗ್ರಾಮದ ರಮೇಶ್ ಎಂಬಾತನ ಮನೆಯಲ್ಲಿ ಮಾಂಸವನ್ನು ಕತ್ತರಿಸಿ ಪಾಲು ಮಾಡುತ್ತಿತ್ತು. ಈ ವೇಳೆ ಹಠಾತ್ ದಾಳಿ ನಡೆಸಿದ ಅರಣ್ಯ ಸಿಬ್ಬಂದಿ, ಕೃತ್ಯಕ್ಕೆ ಬಳಸಿದ್ದ ಎರಡು ಬಂದೂಕುಗಳು ಹಾಗೂ ಅಪಾರ ಪ್ರಮಾಣದ ವನ್ಯಜೀವಿ ಮಾಂಸವನ್ನು ಜಪ್ತಿ ಮಾಡಿದ್ದಾರೆ.
ಅಧಿಕಾರಿಗಳ ದಾಳಿಯ ಸುಳಿವು ಸಿಗುತ್ತಿದ್ದಂತೆ ಆರೋಪಿಗಳಾದ ಮಹೇಂದ್ರ, ಪ್ರಕಾಶ್ ಮತ್ತು ಮಲ್ಲಯ್ಯ ಎಂಬುವವರು ಸ್ಥಳದಿಂದ ಕಾಲ್ಕಿತ್ತಿದ್ದು, ರಮೇಶ್ ಬಲೆಗೆ ಬಿದ್ದಿದ್ದಾನೆ.
ಸದ್ಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮೂಡಿಗೆರೆ ಅರಣ್ಯ ಕಚೇರಿಯಲ್ಲಿ ನಾಲ್ವರ ಮೇಲೂ ಎಫ್‌ಐಆರ್ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಮೂವರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.
