ಚಿಕ್ಕಮಗಳೂರು: ದತ್ತಪೀಠಕ್ಕೆ ಸಂಬಂಧಪಟ್ಟಂತೆ ಅಯೋದ್ಯೆ ಮಾದರಿಯಲ್ಲಿ ಟ್ರಸ್ಟ್ ನಿರ್ಮಾಣ ಮಾಡಬೇಕು. ಆ ಟ್ರಸ್ಟ್ ಸಂಪೂರ್ಣ ಅಧಿಕಾರವನ್ನು ಹಿಂದುಗಳಿಗೆ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ್ ಜಿ ಆಗ್ರಹಿಸಿದರು.
ದತ್ತಮಾಲಾ ಅಭಿಯಾನದ ಹಿನ್ನೆಲೆಯಲ್ಲಿ ನಡೆದ ಶೋಭಾಯಾತ್ರೆಯ ಧರ್ಮಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದತ್ತ ಪೀಠದ ವಿಷಯದಲ್ಲಿ ಯಾವುದೇ ಕಾರಣಕ್ಕೂ ಸರ್ಕಾರದ ಹಸ್ತಕ್ಷೇಪ ಇರಬಾರದು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.
ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ಚರ್ಚ್ ಹಾಗೂ ಮಸೀದಿಗಳ ಮೇಲಿನ ಅಧಿಕಾರ ಸರ್ಕಾರಕ್ಕೆ ಇರುವುದಿಲ್ಲ. ಹೀಗಿರುವಾಗ ದೇವಸ್ಥಾನಗಳು ಸರ್ಕಾರದ ಹೊರತಾಗಿರಬೇಕು. ಸರ್ಕಾರಗಳು ಯಾವುದೇ ಇರಲಿ ದೇವಸ್ಥಾನಗಳನ್ನು ಹಿಂದುಗಳಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಹಿಂದುಗಳು ಯಾರ ಮೇಲೆಯೂ ಆಕ್ರಮಣ ಮಾಡುವುದಿಲ್ಲ. ಆದರೆ ನಮ್ಮ ಮೇಲೆ ಆಕ್ರಮಣ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ಶಾಂತವಾಗಿರುವ ಹಿಂದುಗಳನ್ನು ಶಾಂತವಾಗಿರಲು ಬಿಡಿ. ಕೆಣಕಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಶ್ವ ಹಿಂದೂ ಪರಿಷತ್ ಮುಖಂಡ ರಂಗನಾಥ ಮಾತನಾಡಿ, ನಾನು ಅಂಗಾಂಗ ದಾನ ಮಾಡುತ್ತಿದ್ದೇನೆ. ಆದರೆ ನನ್ನ ಅಂಗಾಂಗಗಳು ಹಿಂದುಗಳಿಗೆ ಸೇರಬೇಕು ಎಂದು ಪ್ರತಿಪಾದಿಸಿದರು.
ದತ್ತ ಪೀಠದ ವಿಷಯದಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ದಾಖಲೆಗಳಲ್ಲಿ ಇನಾಮ್ ದತ್ತಾತ್ರೆಯ ಪೀಠ ಎಲ್ಲಿದೆ. ಆದರೆ ಅಧಿಕಾರಿಗಳು ದಾಖಲೆಗಳಲ್ಲಿ ಇನಾಂ ಬಾಬಾ ಬುಡನ್ ದರ್ಗಾ ಎಂದು ತೋರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
