ಬೆಳಗಾವಿ: ರಾಜ್ಯದ ಸರ್ಕಾರಿ ಇಲಾಖೆಗಳು, ನಿಗಮ ಮಂಡಳಿಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಆರ್ಥಿಕ ಇಲಾಖೆಯ ಅನುಮತಿ ಪಡೆದು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ನಿರಾಣಿ ಹಣಮಂತ ರುದ್ರಪ್ಪ ಅವರು ರಾಜ್ಯದಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ ಮತ್ತು ಅವುಗಳನ್ನು ಭರ್ತಿ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಕೋರಿದ್ದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ರಾಜ್ಯದ ವಿವಿಧ ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿಯಿರುವುದನ್ನು ಒಪ್ಪಿಕೊಂಡರು.
ಖಾಲಿ ಹುದ್ದೆಗಳ ವಿವರ:
ವಿವಿಧ ನಿಗಮ ಮಂಡಳಿಗಳಲ್ಲಿ 1,01,420 ಹುದ್ದೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ 14,677 ಹುದ್ದೆಗಳು ಸೇರಿದಂತೆ ಒಟ್ಟು 1,88,037 ಹುದ್ದೆಗಳು ಖಾಲೆ ಇವೆ.
ಭರ್ತಿಗೆ ಕೈಗೊಂಡ ಕ್ರಮಗಳು:
ಈಗಾಗಲೇ 24,300 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತಿದೆ. ಇದರ ಜೊತೆಗೆ, ಹೈದರಾಬಾದ್-ಕರ್ನಾಟಕ (ಈಗಿನ ಕಲ್ಯಾಣ ಕರ್ನಾಟಕ) ಪ್ರದೇಶದ ಮೀಸಲಾತಿ (371ಜೆ ವಿಧಿ) ಅಡಿಯಲ್ಲಿ 32,132 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಒಟ್ಟಾರೆಯಾಗಿ, ಈವರೆಗೆ 56,432 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ನೇಮಕಾತಿ ವಿಳಂಬಕ್ಕೆ ಕಾರಣ:
ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬವಾಗಲು ಒಳಮೀಸಲಾತಿಯ ಬಿಕ್ಕಟ್ಟು ಒಂದು ಪ್ರಮುಖ ಕಾರಣವಾಗಿತ್ತು. ಆದರೆ, ಈಗ ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಆದ್ದರಿಂದ, ಇನ್ನು ಮುಂದೆ ಆರ್ಥಿಕ ಇಲಾಖೆಯ ಅನುಮತಿ ಪಡೆದು ಶೀಘ್ರದಲ್ಲಿ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
