ಮೂಡಿಗೆರೆ: ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ಶನಿವಾರ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆ ನಡೆಯಿತು.
ಸಭೆಯಲ್ಲಿ ನಿವೇಶನ, ಕಾಡುಪ್ರಾಣಿಗಳು, ಪ್ರವಾಸೋಧ್ಯಮ, ವಿದ್ಯುತ್, ಪೋಡಿ ಮುಕ್ತ ಗ್ರಾಮ ಸೇರಿದಂತೆ ಅನೇಕ ವಿಚಾರ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಶಾಸಕಿ ನಯನಾ ಮೋಟಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾನು ಶಾಸಕಿಯಾದ ಬಳಿಕ ಲೋಕಸಭೆ ಚುನಾವಣೆ ಬರುವವರೆಗೂ ತನ್ನ ವ್ಯಾಪ್ತಿಗೆ ಬರುವ 49 ಗ್ರಾ.ಪಂ. ಪೈಕಿ 37 ಗ್ರಾ.ಪಂ.ಯಲ್ಲಿ ಜನ ಸಂಪರ್ಕ ಸಭೆ ನಡೆಸಿ ಸಾಕಷ್ಟು ಸಮಸ್ಯೆ ಬಗೆಹರಿಸಿದ್ದೇನೆ. ಇನ್ನೂ 12 ಗ್ರಾ.ಪಂ. ಬಾಕಿ ಉಳಿದಿತ್ತು. ಇದೀಗ ಆ ಸೇವೆ ಜನರಿಗೆ ಇನ್ನಷ್ಟು ಅನುಕೂಲವಾಗಲು ಮುಖ್ಯಮಂತ್ರಿಗಳು ಪ್ರಜಾಸೇವೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಸಾರ್ವಜನಿಕರು ತಾಳ್ಮೆ ಕಳೆದುಕೊಳ್ಳದೇ ಅಧಿಕಾರಿಗಳ ಮೇಲೆ ಒತ್ತಡ ಹಾಕಬಾರದು. ತನ್ನ ವ್ಯಾಪ್ತಿಯಲ್ಲಿ ಬಗೆಹರಿಸುವ ಕೆಲಸವನ್ನು ತಾನು ಮಾಡುತ್ತೇನೆ. ಸರಕಾರದ ಮಟ್ಟದಲ್ಲಿ ಪರಿಹರಿಸಲು ಸರಕಾರ ನಿಮ್ಮ ಮನೆ ಬಾಗಿಲಿಗೆ ಬಂದಿರುವ ಪ್ರಜಾಸೇವೆ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಅರ್ಜಿದಾರರು, ಪೋಡಿ ಮುಕ್ತ ಗ್ರಾಮ ಮಾಡುತ್ತೇವೆಂದು ಸರಕಾರ ಘೂಷಿಸಿತ್ತು. ಆದರೆ ಡೀಮ್ಡ್ ಅರಣ್ಯ ವೆಂಬ ಕಾರಣಕ್ಕೆ ಸಮಸ್ಯೆ ಉಂಟಾಗಿದೆ. ಆದರೆ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಲು ಮುಂದಾಗುತ್ತಿಲ್ಲ. ಫಾರಂ ನಂ 50 ಮತ್ತು 53ಯಲ್ಲಿ ಅರ್ಜಿ ಹಾಕಿದ ಸಾವಿರಾರು ಫಲಾನುಭವಿಗಳ ಅರ್ಜಿ ವಜಾ ಮಾಡಲಾಗಿದೆ. ಈ ಬಗ್ಗೆ ಹೈ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರೂ ಪುನಃ ಅರ್ಜಿ ವಜಾ ಮಾಡಲಾಗುತ್ತಿದೆ. ಜಿ. ಹೊಸಳ್ಳಿಯಲ್ಲಿ ಮನಸ್ಸಿಗೆ ಬಂದಂತೆ ದಾಖಲೆ ಸೃಷ್ಟಿ ಮಾಡಿ, ಅಧಿಕಾರಿಗಳು ಗೊಂದಲ ಸೃಷ್ಟಿ ಮಾಡಿದ್ದಾರೆ.
ಕಳಸದಲ್ಲಿ 30 ಎಕರೆ ಸರಕಾರಿ ಭೂಮಿ ಪತ್ತೆ ಹಚ್ಚಲಾಗಿದ್ದು, ಈ ಬಗ್ಗೆ ಡಿಸಿ ಮತ್ತು ಎಸಿ ಸರ್ವೆ ಮಾಡಿ ಭೂಮಿ ವಶಪಡಿಸಿಕೊಳ್ಳಲು ಸೂಚಿಸಿದ್ದಾರೆ. ಆದರೆ ಇದೂವರೆಗೂ ಸರ್ವೆ ಕಾರ್ಯ ನಡೆಸಿಲ್ಲ. ಕೂಡಲೇ ಸರ್ವೆ ಕಾರ್ಯ ಮುಗಿಸಿ, ಭೂಮಿ ವಶಪಡಿಸಿಕೊಂಡು ಕಳಸ ತಾಲೂಕಿನ ಜನರ ಉಪಯೋಗಕ್ಕೆ ಮೀಸಲಿರಿಸಬೇಕು. ಅಲ್ಲದೇ ಅಕ್ರಮ ಭೂ ಮಂಜೂರಾತಿ ಬಗ್ಗೆ ಎಸ್ಐಟಿ ವರದಿ ಜಾರಿ ಮಾಡುವ ಮೂಲಕ ತಾಲೂಕಿಗೆ ಸುಮಾರು 10 ಸಾವಿರಕ್ಕೂ ಅಧಿಕ ಎಕರೆ ಭೂಮಿ ವಶಪಡಿಸಿಕೊಳ್ಳಬೇಕು. ಎಸ್.ಎಂ.ಕೃಷ್ಣ ಸರಕಾರವಿದ್ದಾಗ ತಾಲೂಕು ಅನಾವೃಷ್ಟಿಯಾಗಿತ್ತು. ಇದರಿಂದ ಹೋಮ್ಸ್ಟೇ ಸ್ಥಾಪಿಸುವ ಮೂಲಕ ಅನೇಕ ಮಂದಿಗೆ ಉದ್ಯೋಗ ಸಿಗುವಂತಾಗಿತ್ತು. ಇದೀಗ ಜಿಲ್ಲೆಗೆ ರೈಲ್ ಬಂದಿದೆ. ಅದನ್ನು ಭಾರತ್ ಜೋಡ್ಗೆ ಸೇರಿಸಬೇಕು. ಈ ಮೂಲಕ ಜನರಿಗೆ ಉದ್ಯೋಗ ಸೃಷ್ಟಿ ಹಾಗೂ ಪ್ರವಾಸಿ ತಾಣಗಳು ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಹೀಗೆ ವಿವಿಧ ಸಮಸ್ಯೆಗಳ ಬಗ್ಗೆ ಅರ್ಜಿದರರು ಸಚಿವರ ಗಮನ ಸೆಳೆದರು.
ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಯಿಸಿ ಮಾತನಾಡಿ, ಇದೊಂದು ಕಾಟಾಚಾರಕ್ಕೆ ನಡೆಯುವ ಸಭೆಯಲ್ಲ. ಜನ ಸಾಮಾನ್ಯರ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯಾಧ್ಯಂತ ಆಯೋಜಿಸಿರುವ ಕಾರ್ಯಕ್ರಮ. ಇಲ್ಲಿ ನಡೆಯುವ ಎಲ್ಲಾ ವಿಚಾರದ ಬಗ್ಗೆ ರೆಕಾರ್ಡ್ ಮಾಡಲಾಗುತ್ತದೆ. ಹವಾಮಾನ ಇಲಾಖೆಯಲ್ಲಿ ಮಳೆ ಬರಬಹುದೆಂಬ ಸಂಶಯದ ರೀತಿಯಲ್ಲಿ ಅಧಿಕಾರಿಗಳು ಉತ್ತರ ನೀಡಬಾರದು. ಇಂತಹ ಸಭೆಗಳು ಮುಂದೆ ನಿರಂತರವಾಗಿ ನಡೆಯಲಿದ್ದು, ಇಂದು ನೀಡಿದ ಅರ್ಜಿಗಳಿಗೆ ಸಮರ್ಪಕವಾದ ಉತ್ತರ ನೀಡುವ ಜತೆಗೆ ಎಲ್ಲಾ ಸಮಸ್ಯೆಗಳು ಪರಿಹರಿಸಬೇಕು. ಕಾನೂನು ತೊಡಕಿನಿಂದ ಕೆಲವೊಂದು ಸಮಸ್ಯೆಗಳು ಇತ್ಯರ್ಥಪಡಿಸಲು ಸಾಧ್ಯವಿಲ್ಲ. ಅಲ್ಲದೇ ಭೂಮಿಗೆ ಸಂಬಂಧಿಸಿದ ಹಾಗೂ ಕಂದಾಯ ಇಲಾಖೆಯಲ್ಲಾಗುವ ಕಾರ್ಯವನ್ನು ಈ ಸಭೆಯಲ್ಲಿ ಇತ್ಯರ್ಥಪಡಿಸಲು ಸಾಧ್ಯವಿಲ್ಲ. ಈ ಬಗ್ಗೆ ಶಾಸಕರು ಜಿಲ್ಲಾಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು.
ಕೃಷಿಗಾಗಿ 10 ಎಚ್ಪಿವರೆಗೆ ಉಚಿತ ವಿದ್ಯುತ್ ನೀಡಲಾಗಿದೆ. ಅದಕ್ಕಾಗಿ 20ಸಾವಿರ ಕೋಟಿ ರೂ ಕೊಟ್ಟಿದ್ದೇವೆ. ನಿಮಗೆ ಬಿಲ್ ಬಂದಿದ್ದರೆ ಅದು ಹಳೆಯ ಬಾಕಿ ಮೊತ್ತ ಬಂದಿರಬಹುದು. ಒಮ್ಮೆ ಪರಿಶೀಲಿಸಿಕೊಳ್ಳಿ. ಕಂದಾಯ ಭೂಮಿ ರೆಕಾರ್ಡ್ ಇದ್ದಾಗ ಅರಣ್ಯ ಇಲಾಖೆ ಅಭಿಪ್ರಾಯ ಕೇಳಿಕೊಂಡು ಜನರಿಗೆ ತೊಂದರೆ ಕೊಡಬಾರದೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಭವರ್ಸಿಂಗ್ ಮೀನಾ ಮಾತನಾಡಿ, ಸೈನಿಕ್ ಸಮ್ಮಾನ್ ಯೋಜನೆಯಲ್ಲಿ ಮಾಜಿ ಸೈನಿಕರಿಗೆ ಆಧ್ಯತೆ ಮೇರೆಗೆ ಮೊದಲು ಜಾಗ, ನಂತರ ನಿವೇಶನ ಕೊಡಬೇಕೆಂದು ಸರಕಾರ ನಿರ್ಧರಿಸಿದೆ. ಜಿಲ್ಲೆಯಲ್ಲಿ ಸುಮಾರು 500 ಅರ್ಜಿ ಬಂದಿದ್ದು, ಮೂಡಿಗೆರೆ ತಾಲೂಕಿನಿಂದ 58 ಮಂದಿ ಅರ್ಜಿ ನೀಡಿದ್ದಾರೆ. ಅ.15 ರೊಳಗೆ ತಹಸೀಲ್ದಾರ್ನಿಂದ ಪಟ್ಟಿ ಪಡೆದು, ನವೆಂಬರ್ ಅಂತ್ಯದಲ್ಲಿ ನಿವೇಶನ ಕೊಡಲು ಕ್ರಮ ವಹಿಸಲಾಗುವುದೆಂದು ಹೇಳಿದರು.
ಎಂಎಲ್ಸಿ ಗಾಯಿತ್ರಿ ಶಾಂತೇಗೌಡ, ಮಾಜಿ ಸಚಿವೆ ಮೋಟಮ್ಮ, ಅಪಾರ ಜಿಲ್ಲಾಧಿಕಾರಿ ನಂಜುಡೆಗೌಡ, ಪೊಲೀಸ್ ಜಿಲ್ಲಾ ಅಧೀಕ್ಷಕ ಜಿತೇಂದ್ರ ಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಿ.ಬಿ.ಶಂಕರ್, ಡಿಎಫ್ಒ ಬೋರೇಗೌಡ, ಭದ್ರಹುಲಿ ಸಂರಕ್ಷಣ ಡಿಎಫ್ಒ ಪುಲಿಕಿತ್ ಮೀನಾ, ಕೊಪ್ಪ ಡಿಎಫ್ಒ ಶಿವಶಂಕರ್, ಎಸಿಎಫ್ ಆಕರ್ಷ್, ತಹಸೀಲ್ದಾರ್ ಎಸ್.ಅಶ್ವಿನಿ ಮತ್ತಿತರರಿದ್ದರು.
