ಚಿಕ್ಕಮಗಳೂರು: ಮಲೆನಾಡು ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಬೆಳಗ್ಗೆಯಿಂದಲೇ ಉತ್ತಮ ಮಳೆಯಾಗುತ್ತಿದೆ. ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ, ಕಳಸ, ಕೊಪ್ಪ ಸೇರಿದಂತೆ ಮಲೆನಾಡಿನ ಹಲವು ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ.
ಚಿಕ್ಕಮಗಳೂರು ನಗರದಲ್ಲೂ ಬೆಳಗ್ಗೆಯಿಂದ ಮಳೆ ಮುಂದುವರಿದಿದ್ದು, ಕಾಲುವೆ ಹಾಗೂ ರಸ್ತೆಗಳಲ್ಲೂ ನೀರು ಹರಿಯುತ್ತಿದೆ. ಎರಡು ತಿಂಗಳ ಬಳಿಕ ಉತ್ತಮ ಮಳೆ ಕಂಡಿರುವುದರಿಂದ ಮಲೆನಾಡಿನ ರೈತರ ಮೊಗದಲ್ಲಿ ಸಂತಸ ಮೂಡಿದೆ.
ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಮಳೆಗಾಗಿ ಆಕಾಶ ನೋಡುತ್ತಿದ್ದ ಕಾಫಿ, ಮೆಣಸು ಹಾಗೂ ಅಡಿಕೆ ಬೆಳೆಗಾರರಿಗೆ ಇಂದಿನ ಮಳೆ ಕೊಂಚ ನೆಮ್ಮದಿ ತಂದಿದೆ.
ಇನ್ನು ಬಯಲುಸೀಮೆಯ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದೆ.
ಎರಡು ತಿಂಗಳ ಬಳಿಕ ಸುರಿದ ಉತ್ತಮ ಮಳೆಯಿಂದ ಕಾಫಿನಾಡಿನ ಮಲೆನಾಡು ಭಾಗದಲ್ಲಿ ರೈತರಲ್ಲಿ ಸಂತಸದ ವಾತಾವರಣ ಕಂಡುಬಂದಿದೆ.
