ಬೆಳಗಾವಿ: ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ವಿಶ್ವವಿಖ್ಯಾತ ದೇಗುಲಗಳ ನಗರಿ ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಯಿತು. ಬೇಲೂರು ಕ್ಷೇತ್ರದ ಶಾಸಕ ಹೆಚ್.ಕೆ.ಸುರೇಶ್ ಅವರು ಪಟ್ಟಣದ ಅಭಿವೃದ್ಧಿಗಾಗಿ ಪೌರಾಡಳಿತ ಇಲಾಖೆಯಿಂದ ಕೈಗೊಳ್ಳಬೇಕಾದ ವಿವಿಧ ಕಾಮಗಾರಿಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ, ಮಾನ್ಯ ಪೌರಾಡಳಿತ ಸಚಿವರಾದ ರಹೀಂ ಖಾನ್ ಅವರಿಂದ ಉತ್ತರವನ್ನು ನೀಡಿದರು.

ಬೇಲೂರಿನ ಪ್ರಮುಖ ಮೂಲಸೌಕರ್ಯಗಳ ಕೊರತೆ ಹಾಗೂ ಅಭಿವೃದ್ಧಿಯ ಅಗತ್ಯಗಳನ್ನು ಎತ್ತಿ ಹಿಡಿದ ಶಾಸಕ ಹೆಚ್.ಕೆ.ಸುರೇಶ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಬೇಲೂರಿನ ಸಮಸ್ಯೆಗಳ ಪರಿಹಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಈ ಅಧಿವೇಶನದ ಅವಧಿಯಲ್ಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯವಿರುವ ಅಭಿವೃದ್ಧಿ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ಬಗ್ಗೆ ರಹೀಂ ಖಾನ್ ಅವರು ಸದನಕ್ಕೆ ಆಶ್ವಾಸನೆ ನೀಡಿದರು.

ವಿಶ್ವ ಪಾರಂಪರಿಕ ತಾಣವಾಗಲಿರುವ ಬೇಲೂರಿನ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲಿ ವಿಶೇಷ ಗಮನ ಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದು, ಶಾಸಕ ಸುರೇಶ್ ಅವರ ಪ್ರಯತ್ನದಿಂದಾಗಿ ಬೇಲೂರು ಪಟ್ಟಣದ ಅಭಿವೃದ್ಧಿ ಕಾರ್ಯಗಳು ಶೀಘ್ರವಾಗಿ ಚುರುಕುಗೊಳ್ಳುವ ನಿರೀಕ್ಷೆ ಮೂಡಿದೆ.
