ಬೆಂಗಳೂರು: ರಾಜ್ಯದಲ್ಲಿ ಅನರ್ಹವಾಗಿ ಬಿಪಿಎಲ್ (BPL) ಪಡಿತರ ಚೀಟಿ ಹೊಂದಿರುವವರ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಮರ ಸಾರಿದೆ. ಕಳೆದ ಮೂರೇ ತಿಂಗಳಲ್ಲಿ ಬರೋಬ್ಬರಿ 15,056 ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುವ ಮೂಲಕ ಸರ್ಕಾರ ಅಕ್ರಮ ಫಲಾನುಭವಿಗಳಿಗೆ ಬಿಗ್ ಶಾಕ್ ನೀಡಿದೆ.
ಇಲಾಖೆಯ ಸೆಪ್ಟೆಂಬರ್ 03 ರಿಂದ ಡಿಸೆಂಬರ್ 14, 2025 ರವರೆಗೆ ತೆಗೆದುಕೊಂಡಿರುವ ಮುಖ್ಯಾಂಶಗಳು ಇಲ್ಲಿವೆ:
- ರದ್ದಾದ ಬಿಪಿಎಲ್ ಕಾರ್ಡ್‌ಗಳು: 15,056
- ಎಪಿಎಲ್‌ಗೆ ವರ್ಗಾವಣೆಯಾದ ಕಾರ್ಡ್‌ಗಳು: 3.90 ಲಕ್ಷ
- ತಾತ್ಕಾಲಿಕ ಅಮಾನತು (ವಿಚಾರಣೆ ಬಾಕಿ ಇದೆ): 5,632
- ಒಟ್ಟು ಕ್ರಮ ಕೈಗೊಳ್ಳಲಾದ ಕಾರ್ಡ್‌ಗಳು: ಸುಮಾರು 4.10 ಲಕ್ಷ
ಈ ಬಗ್ಗೆ ವಿಧಾನಸಭೆಯಲ್ಲಿ ಗುರುವಾರ ಮಾತನಾಡಿದ ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ, ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿಯನ್ನು ಪರಿಷ್ಕರಿಸುವ ಸುಳಿವು ನೀಡಿದ್ದಾರೆ. “ಕೇಂದ್ರ ಸರ್ಕಾರದ ಮಾನದಂಡದಂತೆ ವಾರ್ಷಿಕ ಆದಾಯದ ಮಿತಿ 1 ಲಕ್ಷದ 20 ಸಾವಿರ ಇದೆ. ಆದರೆ, ಪ್ರಸ್ತುತ ದಿನಗಳಲ್ಲಿ ಕೂಲಿ ಕಾರ್ಮಿಕರಿಗೂ ದಿನಕ್ಕೆ 500 ರೂ. ಸಿಗುತ್ತಿದ್ದು, ಅವರ ವಾರ್ಷಿಕ ಆದಾಯ 1.80 ಲಕ್ಷ ರೂಪಾಯಿ ದಾಟುತ್ತಿದೆ. ಹೀಗಾಗಿ ವಾಸ್ತವ ಸ್ಥಿತಿಗೆ ಅನುಗುಣವಾಗಿ ಆದಾಯ ಮಿತಿ ಬದಲಾವಣೆಯ ಅಗತ್ಯವಿದೆ” ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಪಡಿತರ ಚೀಟಿಗಳ ಪ್ರಸ್ತುತ ಸ್ಥಿತಿ:
ಕೇಂದ್ರ ಸರ್ಕಾರದ ವರದಿಯ ಪ್ರಕಾರ, ಕರ್ನಾಟಕದ ಜನಸಂಖ್ಯೆಯ ಶೇ. 73ರಷ್ಟು ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿವೆ. ಆದರೆ ನಿಯಮಗಳ ಪ್ರಕಾರ ಈ ಪ್ರಮಾಣ ಶೇ. 50ಕ್ಕೆ ಸೀಮಿತವಾಗಿರಬೇಕು. ಪ್ರಸ್ತುತ ರಾಜ್ಯದಲ್ಲಿರುವ ಕಾರ್ಡ್‌ಗಳ ವಿವರ ಹೀಗಿದೆ:
| ಕಾರ್ಡ್ ವಿಧ | ಒಟ್ಟು ಸಂಖ್ಯೆ |
| ಒಟ್ಟು ರೇಷನ್ ಕಾರ್ಡ್‌ಗಳು | 1,53,65,889 |
| ಸಕ್ರಿಯ ಬಿಪಿಎಲ್ ಕಾರ್ಡ್‌ಗಳು | 1,13,56,089 |
| ಅಂತ್ಯೋದಯ ಕಾರ್ಡ್‌ಗಳು | 42,94,924 |
ಸರ್ಕಾರವು ಗುರುತಿಸಿರುವ ಸುಮಾರು 7.75 ಲಕ್ಷ ಶಂಕಾಸ್ಪದ ಫಲಾನುಭವಿಗಳ ದಾಖಲೆಗಳ ಪರಿಶೀಲನೆ ಮುಂದುವರಿಯಲಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಅಕ್ರಮ ಕಾರ್ಡ್‌ಗಳು ರದ್ದಾಗುವ ಸಾಧ್ಯತೆಯಿದೆ.
