ಸಕಲೇಶಪುರ: ಪಟ್ಟಣದ ಅರೇಹಳ್ಳಿ ಬೀದಿಯ ಡಾಲರ್ಸ್ ಕಾಲೋನಿಯಲ್ಲಿ ಜಡಿ ಮಳೆ ಹಾಗೂ ಬಿರುಗಾಳಿಯ ಪರಿಣಾಮ ನೂತನ ಬಡಾವಣೆಗೆ ನಿರ್ಮಿಸಲಾಗುತ್ತಿದ್ದ ಬೃಹತ್ ತಡೆಗೋಡೆ ಕುಸಿದು ಎರಡು ವಾಸದ ಮನೆಗಳಿಗೆ ಹಾನಿಯಾದ ಘಟನೆ ನಡೆದಿದೆ. ಅದೃಷ್ಟವಶಾತ್ ಮನೆಯೊಳಗೆ ಮಲಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಶಾಸಕ ಸಿಮೆಂಟ್ ಮಂಜು ಹಾಗೂ ತಹಶೀಲ್ದಾರ್ ಸುಪ್ರೀತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೊಳಗಾದ ಮಧು ಹಾಗೂ ಅಬ್ದುಲ್ ಮುನಾಫ್ ಅವರ ಮನೆಗಳನ್ನು ವೀಕ್ಷಿಸಿ ಕುಟುಂಬಸ್ಥರಿಂದ ಘಟನೆ ಕುರಿತು ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಶಾಸಕ ಸಿಮೆಂಟ್ ಮಂಜು ತಡೆಗೋಡೆ ನಿರ್ಮಾಣ ಕಾಮಗಾರಿಯಲ್ಲಿ ಗುಣಮಟ್ಟದ ಬಗ್ಗೆ ಅನುಮಾನಗಳಿವೆ. ಕಾಮಗಾರಿ ಆರಂಭಕ್ಕೂ ಮುನ್ನ ಮತ್ತು ನಂತರ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕ ಪರಿಶೀಲನೆ ನಡೆಸಬೇಕಿತ್ತು. ಪುರಸಭೆ ಪರವಾನಗಿ ನೀಡಿದ ಬಳಿಕವೂ ಕಾಮಗಾರಿಯ ಮೇಲ್ವಿಚಾರಣೆ ಆಗದಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಡೆಗೋಡೆಯ ಪಕ್ಕದಲ್ಲೇ ಮಕ್ಕಳು ಆಟವಾಡುವ ಪ್ರದೇಶವಾಗಿದೆ. ಘಟನೆ ಮಧ್ಯರಾತ್ರಿ ನಡೆದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಮನೆಯೊಳಗೆ ಮಲಗಿದ್ದವರು ಪಾರಾಗಿರುವುದು ಅದೃಷ್ಟ ಎಂದು ಹೇಳಿದರು.
ಇದೇ ವೇಳೆ ಬಡಾವಣೆ ನಿರ್ಮಿಸುತ್ತಿರುವ ರೈಟ್ ಡೆವಲಪರ್ಸ್ ಸಂಸ್ಥೆಯ ಮಾಲೀಕರನ್ನು ಕರೆಸಿ, ಹಾನಿಗೊಳಗಾದ ಮನೆಗಳಿಗೆ ಆಗಿರುವ ನಷ್ಟವನ್ನು ತಕ್ಷಣ ಸರಿಪಡಿಸುವಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಡಾಲರ್ಸ್ ಕಾಲೋನಿಯಲ್ಲಿ ಬಡಾವಣೆಗೆ ಮಣ್ಣು ಕುಸಿಯದಂತೆ ಸುಮಾರು 25 ಅಡಿ ಎತ್ತರ ಹಾಗೂ 150 ಮೀಟರ್ ಉದ್ದದ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಯಿಂದ ತಡೆಗೋಡೆಯ ಒಂದು ಭಾಗ ಕುಸಿದು ಪಕ್ಕದ ಎರಡು ಮನೆಗಳ ಮೇಲೆ ಬಿದ್ದ ಪರಿಣಾಮ ಮನೆಗಳಿಗೆ ಹಾನಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರಿಶೀಲನೆ ಮುಂದುವರಿದಿದ್ದು, ಹಾನಿಯ ಪ್ರಮಾಣ ಹಾಗೂ ಕಾಮಗಾರಿಯ ಗುಣಮಟ್ಟದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
