ಕೊಟ್ಟಿಗೆಹಾರ:ಮೂಡಿಗೆರೆ ತಾಲ್ಲೂಕಿನ ತರುವೆ ಗ್ರಾಮದ ಕೃಷ್ಣಾಚಾರ್ ಮತ್ತು ಮೀನಾಕ್ಷಮ್ಮ ದಂಪತಿಯ ಪುತ್ರಿ ಡಾ. ಸರಿತಾ ಟಿ.ಕೆ ಅವರು ಗ್ಲೋಕಲ್ ಯುನಿವರ್ಸಿಟಿ, ಸಹರನ್‌ಪುರ್‌ನಲ್ಲಿ ನಡೆದ ಕಾನ್ವೋಕೇಶನ್ ಡೇ ಸಮಾರಂಭದಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದಿಂದ ಪಿಎಚ್.ಡಿ (ಡಾಕ್ಟರೇಟ್) ಪದವಿ ಪಡೆದು ಶೈಕ್ಷಣಿಕ ಸಾಧನೆ ಮಾಡಿದ್ದಾರೆ.
ಡಾ. ಸರಿತಾ ಟಿ.ಕೆ ಅವರು “ಭಾರತೀಯ ಐಟಿ ಕಂಪನಿಗಳಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ರೂಪಿಸುವಲ್ಲಿ ಕೃತಕ ಬುದ್ಧಿಮತ್ತೆಯ ಪ್ರಭಾವ ಮತ್ತು ಪರಿಣಾಮಕಾರಿತ್ವದ ಕುರಿತು ಆಳವಾದ ವಿಶ್ಲೇಷಣೆ” ಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ಮಂಡಿಸಿ ಈ ಪದವಿಯನ್ನು ಪಡೆದಿದ್ದು, ಇದು ಅವರ ವೃತ್ತಿ ಜೀವನದ ಮಹತ್ವದ ಮೈಲಿಗಲ್ಲಾಗಿದೆ.
ತರುವೆ ಗ್ರಾಮದವರಾದ ಸರಿತಾ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅತ್ತಿಗೆರೆ ಪ್ರಾಥಮಿಕ ಪಾಠಶಾಲೆಯಲ್ಲಿ ಪಡೆದಿದ್ದಾರೆ. ಸತತ ಪರಿಶ್ರಮ, ಅಧ್ಯಯನಶೀಲತೆ ಮತ್ತು ಶಿಸ್ತುಬದ್ಧ ಜೀವನದ ಮೂಲಕ ಉನ್ನತ ಶೈಕ್ಷಣಿಕ ಗುರಿಯನ್ನು ಸಾಧಿಸಿರುವುದು ಗ್ರಾಮಕ್ಕೂ ಹೆಮ್ಮೆಯ ವಿಷಯವಾಗಿದೆ.
ಪ್ರಸ್ತುತ ಡಾ. ಸರಿತಾ ಟಿ.ಕೆ ಅವರು ಗವರ್ನಮೆಂಟ್ ಫಸ್ಟ್ ಗ್ರೇಡ್ ಕಾಲೇಜು, ಹಳೇಬೀಡು ಇಲ್ಲಿ ಎಂ.ಕಾಂ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿ ಉತ್ತಮ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದಾರೆ.
ಅವರ ಈ ಶೈಕ್ಷಣಿಕ ಸಾಧನೆಗೆ ಕುಟುಂಬಸ್ಥರು, ವಿದ್ಯಾರ್ಥಿಗಳು, ಕಾಲೇಜಿನ ಪ್ರಾಂಶುಪಾಲರು, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಊರಿನ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
